ಜಿಲ್ಲೆ

ಘಂಟ್ಲವಾರಂಪಲ್ಲಿ ಪಿಡಿಒ ಎತ್ತಂಗಡಿ

ಎನ್.ವೆಂಕಟೇಶ್

ಕೆರೆ ಜಾಗಕ್ಕೆ ಅಕ್ರಮ ಇ ಸ್ವತ್ತು ಹಂಚಿಕೆ ಪ್ರಕರಣ ತಾಪಂ ಇಒಗೆ ತನಿಖೆ ಹೊಣೆ


ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ಭ್ರಷ್ಟಾಚಾರದಲ್ಲಿ ತೊಡಗಿದ್ದ ಘಂಟಂವಾರಪಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣಾ ಕುಮಾರಿ ಅವರನ್ನು ಬಾಗೇಪಲ್ಲಿ ತಾಲೂಕಿನಿಂದ ಶಿಡ್ಲಘಟ್ಟ ತಾಲೂಕಿಗೆ ವರ್ಗಾವಣೆ ಮಾಡಿ, ಸರ್ಕಾರಿ ಕೆರೆ ಜಾಗಕ್ಕೆ ಇ ಸ್ವತ್ತು ನೀಡಿರುವ ಪ್ರಕರಣವನ್ನು ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ ಬಾಗೇಪಲ್ಲಿ ತಾಪಂ ಇಒ ರಮೇಶ್ ಅವರಿಗೆ ಆದೇಶಿಸಿದ್ದಾರೆ.
ತಾಲೂಕಿನ ಘಂಟಂವಾರಪಲ್ಲಿ ಗ್ರಾಪಂ ಕಾರ್ಯಾಲಯದ ಪಿಡಿಒ ಅರುಣಾ ಕುಮಾರಿ, ಕಾರ್ಯದರ್ಶಿ ಚಂದ್ರಾರೆಡ್ಡಿ ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಶಾಮಿಲಾಗಿ ಘಂಟಂವಾರಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿರುವ ಏಟಿಗಡ್ಡಪಲ್ಲಿ ಗ್ರಾಮ ಸರ್ವೇ ನಂ.28ರ ಸರ್ಕಾರ ಕೆರೆ ಜಾಗಕ್ಕೆ ನಕಲಿ ಹಕ್ಕುಪತ್ರ ಸೃಷ್ಟಿಸಿ, ಇ ಸ್ವತ್ತು ಖಾತೆ ನೀಡಿರುವ ಬಗ್ಗೆ ಸೆ.23 ರಂದು ‘ವಿಜಯವಾಣಿ’ಯಲ್ಲಿ ‘ಘಂಟಂವಾರಪಲ್ಲಿ ಗ್ರಾಮದ ಕೆರೆ ಜಾಗಕ್ಕೆ ಅಕ್ರಮ ಇ ಸ್ವತ್ತು’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು.
ಇದರಿಂದ ಎಚ್ಚೆತ್ತ ಜಿಪಂ ಸಿಇಒ ಪ್ರಕಾಶ್ ಜಿ.ನಿಟ್ಟಾಲಿ ಅವರು, ಅಕ್ರಮ ಇ ಸ್ವತ್ತು ವಿತರಣೆಗೆ ಕಾರಣರಾಗಿರುವ ಪಿಡಿಒ ಅರುಣಾ ಕುಮಾರಿ ಅವರನ್ನು ಬಾಗೇಪಲ್ಲಿ ತಾಲೂಕಿನಿಂದ ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಪಂಗೆ ವರ್ಗಾವಣೆ ಮಾಡಿ, ಇ ಸ್ವತ್ತು ಅಕ್ರಮ ಕುರಿತು ಸಮಗ್ರ ವರದಿ ನೀಡುವಂತೆ ತಾಪಂ ಇಒ ರಮೇಶ್ ಅವರಿಗೆ ಸೆ.27 ರಂದು ಸೂಚಿಸಿದ್ದಾರೆ.
ಇ ಸ್ವತ್ತು ಅಕ್ರಮದಲ್ಲಿ ಭಾಗಿಯಾಗಿರುವ ಅರುಣಾ ಕುಮಾರಿ ಅವರನ್ನು ವರ್ಗಾವಣೆ ಮಾಡಿ ಶಿಸ್ತು ಕ್ರಮಕ್ಕೆ ಮುಂದಾಗಿದ್ದು, ಮತ್ತೋರ್ವ ಅಧಿಕಾರಿ ಗ್ರಾಪಂ ಕಾರ್ಯದರ್ಶಿ ಚಂದ್ರಾರೆಡ್ಡಿ ತಲೆದಂಡವಾಗುವ ಎಲ್ಲ ಸಾಧ್ಯತೆ ಇವೆ.


2020ರಲ್ಲೂ ಅಕ್ರಮ
ಬಾಗೇಪಲ್ಲಿ ತಾಲೂಕಿನ ಘಂಟಂವಾರಪಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ 2020ರಲ್ಲೂ 4,156 ಇ ಸ್ವತ್ತು ಖಾತೆಗಳ ಅಕ್ರಮದ ಬಗ್ಗೆ ವಿಜಯವಾಣಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಅಂದು ಇ ಸ್ವತ್ತು ಅಕ್ರಮದಲ್ಲಿ ಭಾಗಿಯಾಗಿದ್ದ ಅಂದಿನ ಪಿಡಿಒ ಬಿ.ನಾರಾಯಣಸ್ವಾಮಿ, ಸುಲ್ತಾನ್ ಅಜೀಜ್, ಕಾರ್ಯದರ್ಶಿ ಧನಂಜಯ ನಾಯಕ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನರಸಿಂಹಮೂರ್ತಿ ಅವರನ್ನು ಅಂದಿನ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಂಶಕರ್ 2020ರ ಜುಲೈನಲ್ಲಿ ಅಮಾನತು ಮಾಡಿ ಇ ಸ್ವತ್ತು ಅಕ್ರಮಗಳಿಗೆ ಬ್ರೇಕ್ ಹಾಕಿದ್ದರು.

ಬಾಗೇಪಲ್ಲಿ ತಾಲೂಕಿನ ಘಂಟಂವಾರಪಲ್ಲಿ ಗ್ರಾಪಂನಲ್ಲಿ ಕೆರೆ ಜಾಗಕ್ಕೆ ಇ ಸ್ವತ್ತು ನೀಡಿರುವ ಪ್ರಕರಣ ಪರಿಶೀಲಿಸಿ ಈಗಾಗಲೇ ನೀಡಿರುವ ಇ ಸ್ವತ್ತ್ತನ್ನು ರದ್ದು ಮಾಡಲು ಸೂಚಿಸಲಾಗಿದೆ. ಪಿಡಿಒ ಅರುಣಾಕುಮಾರಿ ಅವರನ್ನು ವರ್ಗಾವಣೆ ಮಾಡಿದ್ದು, ಇ ಸ್ವತ್ತು ಅಕ್ರಮದ ಬಗ್ಗೆ ತನಿಖಾ ವರದಿ ಸಲ್ಲಿಸುವಂತೆ ತಾಪಂ ಇಒ ರಮೇಶ್ ಅವರಿಗೆ ಸೂಚಿಸಲಾಗಿದೆ. ತನಿಖಾ ವರದಿ ಕೈ ಸೇರಿದ ನಂತರ ಪರಿಶೀಲಿಸಿ ಇಬ್ಬರು ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುತ್ತದೆ.ಪ್ರಕಾಶ್ ಜಿ.ನಿಟ್ಟಾಲಿ, ಜಿಪಂ ಸಿಇಒ, ಚಿಕ್ಕಬಳ್ಳಾಪುರ.
ಬಾಗೇಪಲ್ಲಿ ತಾಲೂಕಿನ ಘಂಟಂವಾರಪಲ್ಲಿ ಗ್ರಾಪಂನಲ್ಲಿ ಕೇಳಿ ಬಂದಿರುವ ಸರ್ಕಾರಿ ಕೆರೆ ಜಾಗಕ್ಕೆ ಇ ಸ್ವತ್ತು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖಾ ವರದಿಯನ್ನು ಈಗಾಗಲೇ ಜಿಪಂ ಕಚೇರಿಗೆ ಸಲ್ಲಿಸಲಾಗಿದೆ. ಜಿಪಂ ಸಿಇಒ ಅವರ ಕೈಗೆ ವರದಿ ತಲುಪಿದ ನಂತರ ಪರಿಶೀಲಿಸಿ ಅಧಿಕಾರಿಗಳ ತಪ್ಪಿದ್ದಲ್ಲಿ ಶಿಸ್ತು ಕ್ರಮದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.ರಮೇಶ್ ತಾಪಂ ಇಒ, ಬಾಗೇಪಲ್ಲಿ