ಪಿಡಿಒ ಉಷಾರಾಣಿ ವಿರುದ್ಧ ಕ್ರಮ ವಹಿಸುವಂತೆ ನರೇಗಾ ಸಹಾಯಕ ನಿರ್ದೇಶಕ ರವೀಂದ್ರ ಅವರಿಗೆ ಮಾಂಬಳ್ಳಿ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಯಳಂದೂರಿನಲ್ಲಿ ಮನವಿ ಪತ್ರ ಸಲ್ಲಿಸಿದರು. 
ಜಿಲ್ಲೆ

ಹಲ್ಲೆ ನಡೆದರೆ ಪಿಡಿಒ ನೇರ ಹೊಣೆ

ಅಭಿನಯ್ ಎಚ್.ಎಂ

ಯಳಂದೂರು: ಮಾಂಬಳ್ಳಿ ಪಿಡಿಒ ಉಷಾರಾಣಿ ಕೆಲ ಸದಸ್ಯರನ್ನು ಇತರ ಸದಸ್ಯರ ವಿರುದ್ಧ ಎತ್ತಿಕಟ್ಟಿ ಗಲಾಟೆ ಮಾಡಿಸಲು ಯತ್ನಿಸುತ್ತಿದ್ದು, ಏನಾದರೂ ಗಲಾಟೆ ಅಥವಾ ಹಲ್ಲೆ ನಡೆದಲ್ಲಿ ಇದಕ್ಕೆ ಪಿಡಿಒ ನೇರ ಹೊಣೆಯಾಗುತ್ತಾರೆ ಎಂದು ಮಾಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್ ಆರೋಪಿಸಿದರು.

ಈ ಸಂಬಂಧ ಬುಧವಾರ ಪಟ್ಟಣದಲ್ಲಿ ತಾಪಂ ಇಒಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಪಿಡಿಒ ಸಮರ್ಪಕ ಉತ್ತರ ನೀಡಿಲ್ಲ. ಗ್ರಾಮದಲ್ಲಿ ದೀಪಾವಳಿ ಹಬ್ಬದಲ್ಲಿ ನಡೆಯುವ ಹಿಂಡಿ ಮಾರಮ್ಮನ ಜಾತ್ರೆಗೆ ಗ್ರಾಮವನ್ನು ಸ್ವಚ್ಛ ಮಾಡಿಲ್ಲ. 7 ಗ್ರಾಮದವರು ಸೇರಿ ಆಚರಿಸುವ ಈ ಹಬ್ಬದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಇದಕ್ಕಾಗಿ ಸಮರ್ಪಕ ಕುಡಿಯುವ ನೀರು, ಬೀದಿ ದೀಪ ಅಳವಡಿಕೆ, ಗ್ರಾಮದಲ್ಲಿ ಎಲ್ಲೆಂದರಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಕಸವನ್ನು ತೆರವುಗೊಳಿಸುವುದು ಸೇರಿದಂತೆ ಹಲವು ವಿಷಯಗಳನ್ನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ಸಮಸ್ಯೆಗಳಿಗೆ ಸ್ಪಂದಿಸದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಹಾಗಾಗಿ ಆ ಸಭೆಯನ್ನು ನಾವು ಕ್ಕರಿಸಿದ್ದೇವೆ ಎಂದು ವಿವರಿಸಿದರು.

ಸದಸ್ಯರ ನಡುವೆ ವಿರಸ ಬಿತ್ತುವ ಕೆಲಸವನ್ನು ಪಿಡಿಒ ಮಾಡುತ್ತಿದ್ದಾರೆ. ಗ್ರಾಮದಲ್ಲಿ ನಡೆಯುವ ಹಬ್ಬದಲ್ಲಿ ಯಾವುದಾರರೂ ತೊಂದರೆಯಾದಲ್ಲಿ ಇದಕ್ಕೆ ನೇರವಾಗಿ ಪಿಡಿಒ ಹೊಣೆಯಾಗುತ್ತಾರೆ. ಇವರ ವಿರುದ್ಧ ಕೂಡಲೇ ಕಾನೂನು ಕ್ರಮ ವಹಿಸಬೇಕು ಎಂದು ತಾಪಂ ಇಒ ಅವರ ಅನುಪಸ್ಥಿತಿಯಲ್ಲಿ ನರೇಗಾ ಸಹಾಯಕ ನಿರ್ದೇಶಕ ರವೀಂದ್ರ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಗ್ರಾಪಂ ಸದಸ್ಯರಾದ ಮುಜಾಹೀದುಲ್ಲಾ, ದರ್ಶನ್‌ಕುಮಾರ್, ಎನ್.ಎಂ.ಮುತ್ತುರಾಜು, ಎಂ.ಲಕ್ಷ್ಮಿಪತಿ, ಲಕ್ಷಿರಾಮು, ಎಸ್. ರಾಜೇಶ್ವರಿ, ರತ್ನಮ್ಮ, ಇಂದ್ರಮ್ಮ ಸೇರಿದಂತೆ ಇತರರು ಇದ್ದರು.