ಕಲಬುರಗಿ: ಸುಖ, ಶಾಂತಿ ನೆಮ್ಮದಿ ಬದುಕಿಗಾಗಿ ದೇವರು, ಧರ್ಮ ಮತ್ತು ಗುರುವನ್ನು ಮರೆಯಬಾರದು ಎಂದು ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಹೇಳಿದರು.
ಪಾಳಾ ಗ್ರಾಮದಲ್ಲಿ ಕಟ್ಟಿ ಹಿರೇಮಠದ ಶ್ರೀ ಮಳೇಂದ್ರ ಶಿವಾಚಾರ್ಯರ ಪುಣ್ಯಾರಾಧನೆ ಧರ್ಮ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ದೇವನೊಬ್ಬ ನಾಮ ಹಲವು. ಯಾವ ಹೆಸರಿನಿಂದ ಕರೆದರೂ ಓಗೊಡುವ ಪರಮಾತ್ಮ ಒಬ್ಬನೇ ಎಂಬ ಅರಿವು ಮೂಡಿದಾಗಲೇ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಸಾಧ್ಯ ಎಂದರು.
ನುಡಿದಂತೆ ನಡೆಯುವುದೇ ನಿಜವಾದ ಧರ್ಮ. ಆಡುವ ಮಾತು, ನಡೆಯುವ ದಾರಿ ಇನ್ನೊಂದಾದರೆ ಮನುಷ್ಯನಿಗೆ ಬೆಲೆ ಸಿಗುವುದಿಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರರ ತತ್ವವನ್ನು ಅರಿಯಲು ಗುರು ಬೇಕು. ಅನ್ನ, ನೀರು, ಗಾಳಿ ಕೊಟ್ಟ ದೇವರನ್ನು ಮರೆಯಬಾರದು ಎಂದು ನುಡಿದರು.
ಶಖಾಪುರ ತಪೋವನ ಮಠದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯ ಆಶೀರ್ವಚನ ನೀಡಿ, ಗುರುವಿಲ್ಲದ, ಗುರಿ ಇಲ್ಲದ ಜೀವನ ವ್ಯರ್ಥ. ಸಮಾಜದಲ್ಲಿನ ಓರೆ-ಕೋರೆ ತಿದ್ದಿ ತೀಡುವುದೇ ಗುರುವಿನ ಧರ್ಮ. ತನ್ನಲ್ಲಿರುವ ಪ್ರತಿಭೆ, ಶಕ್ತಿಯನ್ನು ಅರಿಯಲು ಗುರು ಬೇಕೇಬೇಕು ಎಂದರು.
ಪಾಳಾ ಮಠದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯ ನೇತೃತ್ವ ವಹಿಸಿದ್ದರು. ನಾಗಣಸೂರ, ಮೈಂದರ್ಗಿ, ಶಹಾಪುರ ಕುಂಬಾರಗೇರಿ, ಅಂಬೇಜೋಗಾಯಿ ಶ್ರೀಗಳು, ಮಾಲಗತ್ತಿಯ ಚೆನ್ನಯ್ಯ ಅಪ್ಪಾಗೋಳ, ಕರಬಸಯ್ಯ ಹಿರೇಮಠ, ಬಸವರಾಜ ಪಾಟೀಲ್, ಸುಭಾಷ ಸಾಹು, ಬಾಪುಗೌಡ ಪಾಟೀಲ್, ಸಂಗಪ್ಪ ಪಾಟೀಲ್, ಶಾಂತಕುಮಾರ ಬನ್ನೂರ, ಶರಣಗೌಡ ಪಾಟೀಲ್, ಬಸವರಾಜ ಶೀಲವಂತ ಅಂಬಲಗಿ ಇತರರಿದ್ದರು.
ಜೇರಟಗಿಯ ಮಡಿವಾಳಯ್ಯ ಶಾಸ್ತಿç ಸ್ವಾಗತಿಸಿದರು. ಸಂತೋಷ ಪಾಳಾ ನಿರೂಪಣೆ ಮಾಡಿದರು. ಯಶವಂತ ಬಡಿಗೇರ, ರಾಜು ಕಟ್ಟಿಸಂಗಾವಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾಶಿ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಬರಮಾಡಿಕೊಳ್ಳಲಾಯಿತು.