ಶಿವಮೊಗ್ಗ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ ಒಟ್ಟು 1,35,475 ರೈತರಿಗೆ 25.98 ಕೋಟಿ ರೂ. ಸೋಮವಾರ ಬಿಡುಗಡೆಯಾಗಿದ್ದು, ಈ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು 6 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದರು. ಆ ಮೂಲಕ ನೇರ ಆರ್ಥಿಕ ಸಹಾಯ ನೀಡುವ ಮೂಲಕ ರೈತರಿಗೆ ಬೆಂಬಲ ನೀಡುತ್ತಿದ್ದಾರೆ. ಸೋಮವಾರ ಪ್ರಧಾನಿ ಮೋದಿ ಅವರು 19ನೇ ಕಂತಿನ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಿದ್ದು, ದೇಶದ 9.8 ಕೋಟಿ ರೈತ ಫಲಾನುಭವಿಗಳಿಗೆ (2.41ಕೋಟಿ ಮಹಿಳಾ ಫಲಾನುಭವಿಗಳು ಸೇರಿದಂತೆ) ಒಟ್ಟು 22 ಸಾವಿರ ಕೋಟಿ ರೂ. ಸಂದಾಯವಾಗುತ್ತಿದೆ.
ಇದುವರೆಗೆ ಈ ಯೋಜನೆಯಡಿ ಒಟ್ಟು 3.68 ಲಕ್ಷ ಕೋಟಿ ರೂ. ಬಿಡುಗಡೆ ಮಾಡಿದಂತಾಗಿದೆ. ಪಿಎಂ ಕಿಸಾನ್ ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ಯೋಜನೆಗಳಲ್ಲಿ ಒಂದಾಗಿದೆ ಎಂದು ಬಿವೈಆರ್ ತಿಳಿಸಿದ್ದಾರೆ.