ಜಿಲ್ಲೆ

ಶೀಘ್ರದಲ್ಲೇ ಬಾಕಿ ಬಿಲ್‌ಗಳಿಗೆ ಹಣ ಪಾವತಿ: ಗುತ್ತಿಗೆದಾರರಿಗೆ ಕೆಎಸ್‌ಸಿಎ ಭರವಸೆ

ಬೆಂಗಳೂರು: ಕ್ರಿಕೆಟ್ ಅಕಾಡೆಮಿ, ಶೌಚಗೃಹ, ಕಿಚನ್ ನಿರ್ಮಾಣ, ಮೈದಾನಗಳ ಮೇಲ್ದರ್ಜೆ ನವೀಕರಣ ಮತ್ತು ಆಲೂರು ಸ್ಟೇಡಿಯಂನ ಸಭಾಂಗಣ ಸೇರಿ ಹಲವು ಕಾಮಗಾರಿಗಳ ಬಿಲ್‌ಗಳಿಗೆ ಬಾಕಿ ಹಣ ಪಾವತಿ ಮಾಡುವ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ( ಕೆಎಸ್‌ಸಿಎ), ಫಿಡಿಲಿಟಸ್ ಕಾರ್ಪ್ ಸಂಸ್ಥೆ ಜೊತೆ ಸಭೆ ನಡೆಸಿತ್ತು.

ಚಿನ್ನಸ್ವಾಮಿ ಮೈದಾನದಲ್ಲಿರುವ ಆಡಳಿತ ಮಂಡಳಿ ಕಚೇರಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ಎ. ರಘುರಾಮ್ ಭಟ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದೆ ಆಗಿರುವ ಕಾಮಗಾರಿಗಳು ಮತ್ತು ಬಾಕಿ ಉಳಿದಿರುವ ಬಿಲ್‌ಗಳ ಹಣ ಪಾವತಿ ಸೇರಿ ಇತ್ಯಾದಿ ವಿಷಯಗಳ ಬಗ್ಗೆ ಕಂಪನಿ ಜೊತೆ ಚರ್ಚಿಸಿ ಬಾಕಿ ಉಳಿದಿರುವ ಪಾವತಿ ಮೊತ್ತವನ್ನು ಶೀಘ್ರದಲ್ಲಿ ಪಾವತಿ ಮಾಡುವುದಾಗಿ ಕೆಎಸ್‌ಸಿಎ ಒಪ್ಪಿಕೊಂಡಿದೆ.

ಕೆಎಸ್‌ಸಿಎ ಕ್ರೀಡಾ ಕೇಂದ್ರ, ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ಮಹಿಳಾ ಮತ್ತು ಪುರುಷರ ಶೌಚಗೃಹ ನಿರ್ಮಾಣ ಮತ್ತು ಗೇಟ್ ಅಳವಡಿಕೆ ಸೇರಿ ವಿವಿಧ ಸಿವಿಲ್ ಕಾಮಗಾರಿಗಳನ್ನು ನಮ್ಮ ಸಂಸ್ಥೆ ನಿರ್ವಹಿಸಿದ್ದರೂ ಹಲವು ವರ್ಷಗಳಿಂದ ಬಿಲ್ ಪಾವತಿಯಾಗಿರಲಿಲ್ಲ. ಮುಖ್ಯವಾಗಿ ಆಲೂರು ಸ್ಟೇಡಿಯಂ ನವೀಕರಣ ಕಾಮಗಾರಿಗಳ ಪಾವತಿಯ ಬಗ್ಗೆ ಕೆಎಸ್‌ಸಿಎಗೆ ಸಾಕಷ್ಟು ಬಾರಿ ಪತ್ರ ಬರೆದಿದ್ದರೂ ಸ್ಪಂದಿಸಿರಲಿಲ್ಲ.ಈ ಬಗ್ಗೆ ಸಭೆಯಲ್ಲಿ ಕೆಎಸ್‌ಸಿಎ ಗಮನಕ್ಕೆ ತರಲಾಗಿತ್ತು. ನಾಲ್ಕೈದು ದಿನಗಳಲ್ಲಿ ಬಾಕಿ ಬಿಲ್‌ಗಳಿಗೆ ಹಣ ಪಾವತಿಸಲಾಗುವುದು ಎಂದು ಕೆಎಸ್‌ಸಿಎ ನಮಗೆ ಭರವಸೆ ಕೊಟ್ಟಿದೆ ಎಂದು ಕಂಪನಿ ನಿರ್ದೇಶಕ ಅನಿರಿತ್ ಹೇಳಿದ್ದಾರೆ.

ಕೆಎಸ್‌ಸಿಎ ಅಧ್ಯಕ್ಷ ಎ.ರಘುರಾಮ್ ಭಟ್, ಹಂಗಾಮಿ ಕಾರ್ಯದರ್ಶಿ ಎಂ.ಎಸ್.ವಿನಯ್ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.