ಕೊಳ್ಳೇಗಾಲ: ನರೇಗಾದಡಿ ಕೆಲಸ ಮಾಡಿದ ಕೂಲಿ ಹಣ ಕೊಡಿಸುವಂತೆ ತಾಲೂಕಿನ ದಾಸನಪುರ ಗ್ರಾಮದಲ್ಲಿ ಮಹಿಳೆಯರು ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋಹಟ್ ಅವರಿಗೆ ಮನವಿ ಮಾಡಿದರು.
ದಾಸನಪುರದಲ್ಲಿನ ಕಾವೇರಿ ತೀರಕ್ಕೆ ಶನಿವಾರ ಜಿಲ್ಲಾಡಳಿತ ಭೇಟಿ ನೀಡಿದ್ದ ವೇಳೆ ಅಧಿಕಾರಿಗಳನ್ನು ಮಹಿಳೆಯರು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಈ ಹಿಂದೆ ಹರಳೆ ಗಾಪಂ ಅಧಿಕಾರಿಗಳು ನರೇಗಾದಡಿ ನೀಡಿದ್ದ ಕೆರೆ ಹೂಳೆತ್ತುವ ಕೆಲಸವನ್ನು 15 ದಿನ ಮಾಡಿದ್ದು, 2 ದಿನದ ಕೂಲಿ ಹಣ ಮಾತ್ರ ಕೊಡಲಾಗಿದೆ. ಇನ್ನುಳಿದ ದಿನಗಳ ಹಣವನ್ನು ನೀಡಿಲ್ಲ. ಮಳೆ ಬೀಳುತ್ತಿರುವುದರಿಂದ ಕೂಲಿ ಕೆಲಸವೂ ಸಿಗುತ್ತಿಲ್ಲ. ಹೀಗಾದರೆ ಬಡವರು ಜೀವನ ಮಾಡುವುದು ಹೇಗೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.
ಪಂಚಾಯಿತಿ ಅಧಿಕಾರಿಗಳು ವರ್ಷಕ್ಕೆ 100 ದಿನ ಕೂಲಿ ನೀಡುತ್ತೇವೆ ಎನ್ನುತ್ತಾರೆ. ಆದರೆ 20 ದಿನವೂ ಕೊಡುವುದಿಲ್ಲ. ಪಂಚಾಯಿತಿ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಅಲ್ಲದೆ, ಗ್ರಾಮದಲ್ಲಿ ಶೌಚಗೃಹ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು.
ತಕ್ಷಣ ಡಿಸಿ ಸ್ಥಳದಲ್ಲಿದ್ದ ಪಿಡಿಒ ರಾಜಮಣಿ ಅವರನ್ನು ಕರೆದು ಕೂಲಿ ಏಕೆ ಹಣ ಬಂದಿಲ್ಲ ಎಂದು ಡಿಸಿ ಶಿಲ್ಪಾನಾಗ್ ಮತ್ತು ಜಿ.ಪಂ ಸಿಇಒ ಮೋನಾ ರೋಹಟ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, ಕಾರ್ಮಿಕರ ಕೂಲಿ ಹಣ ಬಿಡುಗಡೆಯಾಗಿದೆ. ಆದರೆ ಕೆಲವರ ಖಾತೆಗೆ ಹಣ ಬಂದಿಲ್ಲ ಎಂದಾಗ, ಈ ಬಗ್ಗೆ ಪರಿಶೀಲಿಸಿ ಕೂಲಿ ಹಣ ಖಾತೆಗೆ ಜಮೆ ಆಗುವಂತೆ ಕ್ರಮವಹಿಸಿ ಎಂದು ಸಿಇಒ ಸೂಚನೆ ನೀಡಿದರು.