ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿಜಯಪುರ- ಬೆಳಗಾವಿ ರಾಜ್ಯ ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಸುಭಾಷ ಶಿರಬೂರ, ಈರಪ್ಪ ಹಂಚನಾಳ, ಹನುಮಂತಗೌಡ ಪಾಟೀಲ, ಹನುಮಂತ ನವಾಬ ಇದ್ದರು. 
ಜಿಲ್ಲೆ

ಕಬ್ಬಿನ ಬಾಕಿ ಬಿಲ್ ಪಾವತಿಸಿ

Vijayapura - Desk - Gurappa Lokuri

ಮುಧೋಳ: ತಾಲೂಕಿನ ತಿಮ್ಮಾಪುರದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಆರಂಭಿಸುವುದು ಹಾಗೂ ರೈತರಿಗೆ ಬಾಕಿ ಹಣ, ಕಾರ್ಮಿಕರ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಹೋರಾಟ ಸಮಿತಿಯಿಂದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿ ವಿಜಯಪುರ- ಬೆಳಗಾವಿ ರಾಜ್ಯ ಹೆದ್ದಾರಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೆಳಗ್ಗೆ 11.30ಕ್ಕೆ ಜಮಾಯಿಸಿದ ಹಲವಾರು ರೈತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲ ಕಾಲ ಪ್ರಯಾಣಿಕರಿಗೆ ತೊಂದರೆ ಆಗಿತ್ತು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ರೈತರು ಮಳೆ ಇಲ್ಲದೆ ಕಷ್ಟದಲ್ಲಿದ್ದು, 2021-22ರಲ್ಲಿ ಕೊಡಬೇಕಾದ 2ನೇ ಕಂತಿನ ಬಿಲ್ 62 ರೂ. ಎಲ್ಲ ಕಾರ್ಖಾನೆಗಳು ಕೊಡಬೇಕು. ನಿರಾಣಿ ಸಕ್ಕರೆ ಕಾರ್ಖಾನೆಯವರು 2018-19ರಲ್ಲಿ ಬಾಕಿ ಉಳಿಸಿಕೊಂಡ 20 ಕೋಟಿ ರೂ. ರೈತರ ಖಾತೆಗೆ ಪಾವತಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಭೇಟಿ ನೀಡಿ ಮಾತನಾಡಿ, ತಿಮ್ಮಾಪುರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಜತೆಗೆ ಹಿಂದಿನ ಬಾಕಿ ಹಣ ಕೊಡಬೇಕಾದ ಉಳಿದ ಕಾರ್ಖಾನೆಗಳ ಬಗ್ಗೆಯೂ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಹಣ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನೀರು ಹರಿಸುವ ಕುರಿತು ಸಂಬಂಧಿಸಿದವರಿಗೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ, ಎರಡ್ಮೂರು ದಿನಗಳಲ್ಲಿ ಮುಧೋಳದಲ್ಲಿ ತಿಮ್ಮಾಪುರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಜಿಲ್ಲಾಧಿಕಾರಿಗಳು ಕರೆಯಲಿರುವ ಸಭೆಯಲ್ಲಿ ಚರ್ಚಿಸಲಾಗುವುದೆಂದು ತಿಳಿಸಿದರು.

ಸುಭಾಷ ಶಿರಬೂರ, ಈರಪ್ಪ ಹಂಚನಾಳ, ಹನುಮಂತಗೌಡ ಪಾಟೀಲ, ಹನುಮಂತ ನವಾಬ, ಮಹೇಶ ಪಾಟೀಲ, ದುಂಡಪ್ಪ ಯರಗಟ್ಟಿ, ರುದ್ರಪ್ಪ ಅಡವಿ, ಅಶೋಕ ಪಡಸಲಗಿ, ನಿಂಗಪ್ಪ ಹೊಸಕೋಟಿ, ಕಲ್ಮೇಶ ಹಣಗೂಜಿ, ರಾಮಣ್ಣ ಸಾವಂತ್ರಿ, ಸೋಮಲಿಂಗ ಅಕ್ಕಿಮರಡಿ ಇತರರಿದ್ದರು.