ಮುಂಡರಗಿ: ಎಲ್ಲರೂ ತಮ್ಮ ಪಾಲಿನ ತೆರಿಗೆಯನ್ನು ಸಕಾಲದಲ್ಲಿ ಪಾವತಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಕೆ.ಆರ್. ಬೆಲ್ಲದ ಕಾಲೇಜ್ ಸಭಾ ಭವನದಲ್ಲಿ ಕಾಲೇಜ್‌ನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ಸ್ವಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತದಲ್ಲಿ ವಿವಿಧ ತೆರಿಗೆ ಪದ್ಧತಿ ಕುರಿತು ಒಂದು ದಿನದ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಿಎಸ್‌ಟಿ ಪದ್ಧತಿ ಬಂದ ನಂತರ ಭಾರತದ ಆರ್ಥಿಕ ಸಂಪನ್ಮೂಲ ವೃದ್ಧಿಸಿದೆ. ಜಿಎಸ್‌ಟಿ ಪದ್ಧತಿಯಿಂದಾಗಿ ದೇಶದ ಆರ್ಥಿಕ ಸ್ಥಿತಿ ತುಂಬಾ ಸುಧಾರಿಸುತ್ತಿದೆ. ಇದರಿಂದ ಭಾರತವು ಹೆಚ್ಚು ಪ್ರಗತಿ ಹೊಂದಲು ಅನುಕೂಲವಾಗಿದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಗದಗ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಧುಸೂಧನ್ ಪೂಣೆಕರ ಮಾತನಾಡಿ, ತೆರಿಗೆಯು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ. ತೆರಿಗೆಯಿಂದ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತೆರಿಗೆ ತುಂಬಿ ದೇಶದ ಏಳಿಗೆಗೆ ಅಳಿಲು ಸೇವೆ ಸಲ್ಲಿಸಬೇಕು ಎಂದರು.
ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ತೆರಿಗೆ ಸಂಗ್ರಹವು ಸಮಾನತೆ, ನ್ಯಾಯ ಸಮ್ಮತವಾಗಿರಬೇಕು. ಭಾರತೀಯ ತೆರಿಗೆ ಪದ್ಧತಿಯು ಸರಳೀಕರಣ ಆಗಬೇಕು. ಜನರು ತುಂಬುವ ತೆರಿಗೆಯ ಮೇಲೆ ಸರ್ಕಾರದ ಶಕ್ತಿ ಅಡಗಿರುತ್ತದೆ. ಜನತೆಗೆ ಉಚಿತ ಕೊಡುಗೆಗಳನ್ನು ನೀಡುವುದರಿಂದ ಸರ್ಕಾರದ ಆರ್ಥಿಕ ಸ್ಥಿತಿ ಹಾಳಾಗುತ್ತದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಎಲ್. ಪೊಲೀಸ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತೆರಿಗೆ ಸಲಹೆಗಾರ ಮುಕುಂದ ಪೋತ್ನಿಸ್, ಡಿ.ಬಿ. ಸಜ್ಜನರ ತೆರಿಗೆಯ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಗದಗ ವಾಣಿಜ್ಯೋದ್ಯಮ ಸಂಸ್ಥೆಯ ಖಜಾಂಚಿ ನಾಗೇಶ ಹುಬ್ಬಳ್ಳಿ, ಕರಬಸಪ್ಪ ಹಂಚಿನಾಳ, ಪ್ರಾಚಾರ್ಯ ಡಾ. ಡಿ.ಸಿ.ಮಠದ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಆರ್.ಎಚ್. ಜಂಗನವಾರಿ ಸ್ವಾಗತಿಸಿದರು. ಡಾ. ಸಂತೋಷ ಹಿರೇಮಠ ನಿರೂಪಿಸಿದರು. ಡಾ. ಅಶ್ವಿನಿ ಕಾವಲಿ ವಂದಿಸಿದರು.