ಯಳಂದೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಇಲ್ಲಿ ಅನೇಕ ರೀತಿಯ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಬೇಕು. ಸರ್ಕಾರದ ಯೋಜನೆಯ ದುರುಪಯೋಗವಾಗದಂತೆ ತಡೆಯಲು ಕ್ರಮ ವಹಿಸಬೇಕೆಂದು ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದರು.
ಗುರುವಾರ ತಾಲೂಕಿನ ಅಗರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ತಪಾಸಣಾ ಗ್ರಾಮಸಭೆಯಲ್ಲಿ ವಿವಿಧ ವಿಷಯ ಚರ್ಚೆಯಾಗಿದೆ.
ನರೇಗಾ ಕಾಮಗಾರಿಯ ತಾಲೂಕು ಸಂಯೋಜಕ ಪ್ರಸನ್ನ ಮಾತನಾಡಿ, ಕಳೆದ ಸಾಲಿನಲ್ಲಿ ಈ ಪಂಚಾಯಿತಿ ವ್ಯಾಪ್ತಿಯಲ್ಲಿ 129 ಕಾಮಗಾರಿಗಳು ನಡೆದಿದ್ದು, 36.35 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಕೊಟ್ಟಿಗೆ, ಬಚ್ಚಲುಗುಂಡಿ ನಿರ್ಮಾಣ, ರಸ್ತೆ ಇತರ ಕಾಮಗಾರಿಗಳು ನಡೆದಿಲ್ಲ ಎಂದು ಆಕ್ಷೇಪಣೆಗಳು ಬಂದಿದ್ದು ಇದನ್ನು ಬಿಲ್ ಮಾಡದೆ ತಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ 15 ನೇ ಹಣಕಾಸು ಯೋಜನೆಯಡಿಯಲ್ಲಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದು ಈ ಹಿಂದೆ ಇದ್ದ ಪಿಡಿಒ ಸಸ್ಪೆಂಡ್ ಕೂಡ ಆಗಿದ್ದಾರೆ. 10.73 ಲಕ್ಷ ರೂ. ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಇತರ ಖರ್ಚುಗಳನ್ನು ತೋರಿಸಲಾಗಿದೆ. ಆದರೆ ಈ ಕಾಮಗಾರಿಗಳೇ ನಡೆದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿಲ್ಲ. ಈ ವಿಷಯವನ್ನು ಪ್ರತಿ ಗ್ರಾಮ ಸಭೆಯಲ್ಲಿ ಮಂಡಿಸಿ ಮುಂದೂಡಲಾಗುತ್ತಿದೆ. ಇದಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕೆಲ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪಿಡಿಒ ಈ ಬಗ್ಗೆ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.
ತಾಲೂಕಿನ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪೂರೈಕೆಯಾಗುತ್ತಿರುವ ನೀರು ಸ್ಥಳೀಯ ಕೊಳವೆ ಬಾವಿಗಳ ನೀರಾಗಿದೆ. ಇಲ್ಲಿಗೆ ಕಾವೇರಿ ಕುಡಿಯುವ ನೀರು ಬರುತ್ತಿಲ್ಲ ಎಂದು ಈ ಇಲಾಖೆಯ ಜೆಇ ಅನುಶ್ರೀ ಅವರನ್ನು ಗ್ರಾಮಸ್ಥರು ತರಾಟೆ ತಡೆದುಕೊಂಡ ಪ್ರಸಂಗವೂ ಜರುಗಿತು. ಇದಕ್ಕೆ ಉತ್ತರ ನೀಡಿದ ಜೆಇ, ಜೆಜೆಎಂ ಯೋಜನೆಯಡಿಯಲ್ಲಿ ಕಾವೇರಿ ಕುಡಿಯುವ ನೀರನ್ನು ರಾತ್ರಿ ವೇಳೆಯಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳಿಗೆ ತುಂಬಿಸಿಕೊಳ್ಳುವಂತೆ ಸಂಬಂಧಪಟ್ಟ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿಗೆ ನೀರಿನ ಹರಿವು ಕಡಿಮೆ ಇರುವುದರಿಂದ ರಾತ್ರಿ ಶೇಖರಿಸಿ ಬೆಳಗ್ಗೆ ಬಿಡಬೇಕೆಂದು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಿನಕಹಳ್ಳಿ ಗ್ರಾಮದಲ್ಲಿ ಕಳೆದ 5 ವರ್ಷದಿಂದಲೂ ರಾವಳೇಸ್ವರ ದೇಗುಲದ 30 ಅಡಿ ರಸ್ತೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ರಸ್ತೆಯನ್ನು ಕೇವಲ 6 ಅಡಿಗೆ ತಂದು ನಿಲ್ಲಿಸಿದ್ದಾರೆ. ಇದನ್ನು ತೆರವುಗೊಳಿಸಿ ಎಂದು ಹಲವು ಬಾರಿ ಅವಲತ್ತುಕೊಂಡರು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದ್ದು, ಈ ಕೆಲಸ ಶೀಘ್ರದಲ್ಲೇ ಆಗಬೇಕು. ಗ್ರಾಮಕ್ಕೆ ಪೌರಕಾರ್ಮಿಕರೇ ಇಲ್ಲವಾಗಿದ್ದು ಪೌರ ಕಾರ್ಮಿಕರನ್ನು ಇಲ್ಲಿಗೆ ನಿಯೋಜಿಸಬೇಕು, ಇಲ್ಲಿನ ಚರಂಡಿ ಹೂಳೆತ್ತಿ ವರ್ಷವಾಗುತ್ತ ಬಂದಿದ್ದು ಇದರ ಹೂಳೆತ್ತಿಸಬೇಕು. ಜತೆಗೆ ಸೂಕ್ತ ಸಮಯಕ್ಕೆ ಕಸ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು. ಈ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುವುದಾಗಿ ಪಿಡಿಒ ಭರವಸೆ ನೀಡಿದರು.
ಪಿಡಿಒ ಉಷಾರಾಣಿ, ಗ್ರಾಪಂ ಅಧ್ಯಕ್ಷ ಮುದ್ದುನಾಯಕ, ಸದಸ್ಯರಾದ ನಳಿನಕುಮಾರಿ, ಅನ್ನಪೂರ್ಣ, ರಾಜಮ್ಮ, ರಾಣಿ, ಕುಮಾರ್, ಪಶು ಇಲಾಖೆಯ ಬಸವರಾಜು, ಅರಣ್ಯ ಇಲಾಖೆಯ ನಾಗರಾಜು, ಕಿನಕಹಳ್ಳಿ ಪ್ರಭುಪ್ರಸಾದ್, ರಾಚಯ್ಯ, ವಿನೋದ್ ಸೇರಿದಂತೆ ಹಲವರು ಇದ್ದರು.