ಬೇಲೂರು: ಪುರಾತತ್ವ ಇಲಾಖೆಯಲ್ಲಿ ದಿನಗೂಲಿಗಳಾಗಿ ಕೆಲಸ ನಿರ್ವಹಿಸುವ ನೌಕರರಿಗೆ ಕನಿಷ್ಠ ವೇತನ ನೀಡುವುದರ ಜತೆಗೆ ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಕರವೇ(ಪ್ರವೀಣ್‌ಶೆಟ್ಟಿ)ಬಣದ ಪದಾಧಿಕಾರಿಗಳು ಸೋಮವಾರ ಪುರಾತತ್ವ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಅಧ್ಯಕ್ಷ ವಿ.ಎಸ್.ಭೋಜೇಗೌಡ ಮಾತನಾಡಿ, ಇಲಾಖೆಯಲ್ಲಿ ಸಾಕಷ್ಟು ವರ್ಷಗಳಿಂದ ದಿನಗೂಲಿಗಳಾಗಿ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಈ ಹಿಂದೆ ಬರುತ್ತಿದ್ದ ವೇತನಕ್ಕಿಂತ ಕಡಿಮೆ ವೇತನವನ್ನು ಅಧಿಕಾರಿಗಳು ನೇರವಾಗಿ ನೌಕರರ ಕೈಗೆ ಕೊಡುತ್ತಾರೆ. ಅಲ್ಲದೆ 11 ತಿಂಗಳಿಂದ ವೇತನ ನೀಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಕಿಡಿಕಾರಿದರು.
ನೌಕರರ ಹಾಜರಾತಿ ಪುಸ್ತಕಕ್ಕೆ ಈ ಹಿಂದೆ ಸಹಿ ಪಡೆಯಲಾಗುತ್ತಿತ್ತು. ಆದರೆ ಈಗ ಸಹಿ ಪಡೆಯುತ್ತಿಲ್ಲ. ಹೀಗಾದರೆ ಇಲಾಖೆಯಲ್ಲಿ 25 ರಿಂದ 30 ವರ್ಷ ಕೆಲಸ ನಿರ್ವಹಿಸಿರುವವರ ಗತಿ ಏನು. ಅವರನ್ನು ನಂಬಿರುವ ಕುಟುಂಬದವರ ಸ್ಥಿತಿ ಏನು ಎಂಬುದನ್ನು ಇಲಾಖೆ ಮೇಲಧಿಕಾರಿಗಳು ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಹಾಸನದ ಮುಖ್ಯ ಕಚೇರಿ ಮುಂದೆ ಜಿಲ್ಲಾ ಸಂಘಟನೆಯೊಂದಿಗೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರವೇ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಮುಖಂಡರಾದ ಗುರು, ಸತೀಶ್, ದೇವಿಪ್ರಸಾದ್, ಲೋಕೇಶ್, ಗಣೇಶ ಇದ್ದರು.