ಜಿಲ್ಲೆ

ಅಕ್ಷರದಾಸೋಹ ಸಿಬ್ಬಂದಿಗೆ ಕನಿಷ್ಠ ವೇತನ ನೀಡಿ

ಸೋಮನಾಥ ರೆಡ್ಡಿ

ಲಕ್ಷ್ಮೇಶ್ವರ: ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸುವ ಅಕ್ಷರದಾಸೋಹ ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರದಾಸೋಹ ಸಿಬ್ಬಂದಿ ಮಂಗಳವಾರ ತಾಪಂ ಇಒ ಕೃಷ್ಣಪ್ಪ ಧರ್ಮರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ 1.21 ಲಕ್ಷ ಬಿಸಿಯೂಟ ತಯಾರಿಸುವ ಸಿಬ್ಬಂದಿ ಇದ್ದಾರೆ. ಅವರಿಗೆ ಸದ್ಯ ಮಾಸಿಕ 3600 ರೂ. ನೀಡಲಾಗುತ್ತಿದೆ. ತಿಂಗಳ ವೇತನ ಲೆಕ್ಕ ಹಾಕಿದರೆ ದಿನಕ್ಕೆ 120 ರೂ. ಮಾತ್ರ ಕೂಲಿ ಸಿಗುತ್ತದೆ. ರಾಜ್ಯದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗುವ ದಿನದ ಕೂಲಿಯನ್ನೇ 316 ರೂ.ಗಳಿಗೆ ನಿಗದಿಪಡಿಸಲಾಗಿದೆ.

ರಾಜ್ಯ ಸರ್ಕಾರವೇ ಕನಿಷ್ಠ ವೇತನವನ್ನು 15 ಸಾವಿರ ರೂ.ಗಳಿಗೆ ನಿಗದಿಪಡಿಸಿರುವಾಗ ಯಾವ ಮಾನದಂಡದ ಆಧಾರದ ಮೇಲೆ ಮಾಸಿಕ 3600 ರೂ. ವೇತನ ನೀಡುತ್ತಿದೆ? ಆದ್ದರಿಂದ ಸರ್ಕಾರವೇ ಘೋಷಿಸಿದಂತೆ ಮಾಸಿಕ ವೇತನ 21 ಸಾವಿರ ರೂ. ಗಳಿಗೆ ಹೆಚ್ಚಿಸಬೇಕು. ಮುಖ್ಯ ಅಡುಗೆಯವರಿಗೆ ಬಿಸಿಯೂಟದ ಜವಾಬ್ದಾರಿ ನೀಡಬೇಕು.

ಶಾಲಾ ರಜಾ ದಿನಗಳಲ್ಲಿ ವೇತನ, ಬಿಸಿಯೂಟ ಯೋಜನೆ ಸರ್ಕಾರವೇ ನಿರ್ವಹಿಸಬೇಕು. ನೌಕರರನ್ನು ಡಿ ಗ್ರುಪ್ ನೌಕರರೆಂದು ಪರಿಗಣಿಸಬೇಕು. 60 ವರ್ಷದಲ್ಲಿ ನಿವೃತ್ತಿ ಹೊಂದುವವರಿಗೆ 1 ಲಕ್ಷರೂ. ಪರಿಹಾರ ನೀಡಬೇಕು.

ಅಡುಗೆ ಮಾಡುವ ವೇಳೆ ಯಾವುದೇ ರೀತಿಯ ದುರ್ಘಟನೆ ಸಂಭವಿಸಿದರೆ ಎಫ್‌ಐಆರ್ ಇಲ್ಲದೆ ಅನುದಾನ ಕೊಡಬೇಕು ಎನ್ನುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅನ್ನಪೂರ್ಣ ಮಡಿವಾಳರ, ಪಾರ್ವತಿ ಗಾಣಿಗೇರ, ಪ್ರೇಮಾ ಮಳಗಿ, ಚೇತನಾ ಸುರಳಿಯವರ, ಕಸ್ತೂರಿ ಮಾಮನಿ, ರಜಿಯಾ ನಧಾಪ್, ಶೈಲಾ ಪರಸಣ್ಣವರ, ಮಹಾದೇವಿ ಖರಾಟೆ, ಸುಮಾ ಹುಲ್ಲೂರ, ದೀಪಾ ಹುಲಿಕಟ್ಟಿ, ರೇಖಾ ಕಳ್ಳಿ, ಪ್ರೇಮಾ ಮಳಗಿ, ಶಂಕ್ರಮ್ಮ ಜೋಗೇರ, ಸಾವಿತ್ರಿ ಶರಸೂರಿ, ಸುಮಂಗಲಾ ನರೇಗಲ್, ಪವಿತ್ರಾ ಗಜಾಕೋಶ, ದೇವಕ್ಕ ಬಳಿಗಾರ, ಲಕ್ಷ್ಮೀ ಪಾಟೀಲ ಇತರರಿದ್ದರು.