ಬೇಲೂರು: ಅಂಗನವಾಡಿ ಕಾರ್ಯಕತೆರ್ಯರು, ಸಹಾಯಕಿಯರನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸಿ ಹೆಚ್ಚುವರಿ ವೇತನದ ಜತೆಗೆ 50 ಲಕ್ಷ ರೂ. ವಿಮೆ ಕಲ್ಪಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ನೌಕರರು ಸಿಐಟಿಯು ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಸಿಐಟಿಯು ತಾಲೂಕು ಅಧ್ಯಕ್ಷೆ ಮಂಜುಳಾ ಮಾತನಾಡಿ, ಕರೊನಾ ಸೋಂಕು ತಡೆಗಟ್ಟಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸುತಿದ್ದಾರೆ. ಆದರೂ ಸರ್ಕಾರ ಮಾತ್ರ ಅಂಗನವಾಡಿ ಕಾರ್ಯಕರ್ತೆಯರ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ತುರ್ತು ಸಂದರ್ಭದಲ್ಲೂ ಕೆಲಸ ನಿರ್ವಹಿಸುವವರಿಗೆ ಸುರಕ್ಷತಾ ಕಿಟ್ ವಿತರಿಸಬೇಕು. ಜತೆಗೆ ಮೇಲ್ವಿಚಾರಕಿಯರ ಹುದ್ದೆಗೆ ಶೇ.75ರ ಮಿತಿಯನ್ನು 100ಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಉಪ ತಹಸೀಲ್ದಾರ್ ನಾಗೇಶಗೌಡರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಕಾರ್ಯದರ್ಶಿ ಸಾವಿತ್ರಮ್ಮ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಕಾಮಾಕ್ಷಿ, ತಾಲೂಕು ಸಂಘದ ಸದಸ್ಯರಾದ ಚಂದ್ರಮ್ಮ, ಜಯಮ್ಮ, ಯಶೋದಾ ಇ ತರರಿದ್ದರು.