ಜಮಖಂಡಿ: ನಿವೃತ್ತ ನೌಕರರು ಸಮಾಜಕ್ಕೆ ಮಾರ್ಗದರ್ಶಕರಾಗಿ ಕಾರ್ಯ ಮಾಡಬೇಕು ಎಂದು ಎಂಆರ್‌ಎನ್ ಉದ್ಯಮ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.
ನಗರದ ಬಸವ ಭವನದಲ್ಲಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ 38ನೇ ವಾರ್ಷಿಕ ಸಭೆ ಹಾಗೂ 70 ವರ್ಷದ ಹಿರಿಯ ಚೇತನರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಮನೆಯಲ್ಲಿನ ಚಿಕ್ಕವರಿಗೆ ಉತ್ತಮ ಸಂಸ್ಕಾರಯುತ ಜೀವನಕ್ಕೆ ಮಾರ್ಗದರ್ಶನ ಮಾಡಬೇಕು ಎಂದರು.
ಓಲೆಮಠದ ಆನಂದ ದೇವರು ಮಾತನಾಡಿ, ವಯಸ್ಸಾದವರು ವೃದ್ಧರಲ್ಲ. ಹರೆವಯಸ್ಸಿನಲ್ಲಿ ಯಾವುದೆ ಕೆಲಸ ಕಾರ್ಯ ಮಾಡದೆ ಉತ್ಸಾಹಿ ಹೀನರು ವೃದ್ಧರು ಎನಿಸಿಕೊಳ್ಳುತ್ತಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಅವಶ್ಯವಾಗಿದೆ. ಇವತ್ತಿನ ಮಕ್ಕಳಿಗೆ ಕಷ್ಟ ಅನ್ನುವುದು ಕಲಿಸಬೇಕಾಗಿದೆ ಎಂದರು.
ಕಾಯಕವೆ ಕೈಲಾಸ ಎಂದು ಶಿವ ಶರಣರು ಹೇಳಿದ್ದಾರೆ. ಜೀವನದಲ್ಲಿ ಎಲ್ಲರ ಜತೆಗೆ ಪ್ರೀತಿ, ವಾತ್ಸಲ್ಯದಿಂದ ಸಂತೋಷವಾಗಿದ್ದುಕೊಂಡು ಬದುಕು ಕಟ್ಟಿಕೊಳ್ಳಬೇಕು. ಬದುಕು ಒಂದೆ ಸಲ ಇದೆ. ಅದು ಮತ್ತೆ ಬರುವುದಿಲ್ಲ. ಇರುವಷ್ಟು ದಿನ ಎಲ್ಲರಿಗೂ ಆದರ್ಶವಾಗಿ ಇರಬೇಕು ಎಂದರು.
ಸಂಘದ ಬೆಳಗಾವಿ ವಿಭಾಗದ ಉಪಾಧ್ಯಕ್ಷ, ವಿಜಯಪುರ ಜಿಲ್ಲಾಧ್ಯಕ್ಷ ಎಸ್.ಪಿ. ಬಿರಾದಾರ ಮಾತನಾಡಿ, ಮನೆಯಲ್ಲಿನ ಹಿರಿಯರು ಒಳ್ಳೆ ಸಂಸ್ಕಾರಯುತ ಜೀವನ ಪದ್ಧತಿಗಳನ್ನು ಮೈಗೂಡಿಸಿಕೊಳ್ಳಬೇಕು. ಅದನ್ನು ಮನೆಯಲ್ಲಿನ ಮೊಮ್ಮಕ್ಕಳು ಚಿಕ್ಕವರು ಅದನ್ನು ಅನುಸರಿಸುತ್ತಾರೆ. ಇದರಿಂದ ಉತ್ತಮ ಸಂಸ್ಕಾರ ಹಾಕಿಕೊಟ್ಟಂತಾಗುತ್ತದೆ. ಯುವಕರು ಹಾದಿ ತಪ್ಪಿದರೆ ಹಿರಿಯರಾದವರು ಮಾರ್ಗದರ್ಶನ ಮಾಡುವಂತ ಜವಾಬ್ದಾರಿ ಇದೆ ಎಂದರು.
ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ ಮಾತನಾಡಿ, ಹಿರಿಯ ಮಾರ್ಗದರ್ಶನ ಸಮಾಜಕ್ಕೆ ಅತ್ಯವಶ್ಯವಾಗಿದೆ ಎಂದರು.
ಎಚ್.ವೈ. ಜರಾಳೆ, ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಬಿ. ಅಜ್ಜನವರ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ಎಚ್.ಎಂ. ಶೆಟ್ಟರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
70 ವರ್ಷ ಮೇಲ್ಪಟ್ಟ 20ಕ್ಕೂ ಅಧಿಕ ಹಿರಿಯ ಚೇತನರನ್ನು, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ನಿವೃತ್ತ ಡಿವೈಎಸ್‌ಪಿ ಪಿ.ಎನ್.ಪಾಟೀಲ, ಸಿ.ಪಿ. ಜನವಾಡ, ಸಂಘದ ಜಿಲ್ಲಾಧ್ಯಕ್ಷ ವಿ.ಬಿ. ಗೋವಿಂದಪ್ಪನವರ ಇತರರು ಇದ್ದರು.
ಯು.ಕೆ. ಗಸ್ತಿ ಸ್ವಾಗತಿಸಿದರು. ಕೆ.ಜಿ. ಘಂಟಿ ವರದಿ ವಾಚನ ಮಾಡಿದರು. ಸಂಗಮೇಶ ಗಾಣಿಗೇರ, ಎಸ್.ಆರ್. ಪಾಟೀಲ, ಎಂ.ಡಿ. ಸಂಖ ನಿರೂಪಿಸಿದರು. ಸಿ.ಪಿ. ಮೇಗಾಡಿ ವಂದಿಸಿದರು.