ಹಟ್ಟಿಚಿನ್ನದಗಣಿ ಕಂಪನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿಧಾನ ಪರಿಷತ್ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಟಿ.ಎ.ಶರವಣ ಮಾತನಾಡಿದರು. ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ, ಜಿಲ್ಲಾಧಿಕಾರಿ ಕೆ.ನಿತೀಶ್, ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ, ಪ್ರಮುಖರಾದ ನಿರಾಣಿ ಹನುಮಂತಪ್ಪ ರುದ್ರಪ್ಪ, ಕೆ.ಪ್ರತಾಪ ಸಿಂಹ ನಾಯಕ ಇತರರಿದ್ದರು. 
ಜಿಲ್ಲೆ

ನೌಕರರ ಸುರಕ್ಷತೆ ಬಗ್ಗೆ ಗಮನ ಹರಿಸಿ

ಹಟ್ಟಿಚಿನ್ನದಗಣಿ: ಕರ್ನಾಟಕ ವಿಧಾನ ಪರಿಷತ್ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಟಿ.ಎ.ಶರವಣ ಹಾಗೂ ಸದಸ್ಯರ ತಂಡ ಬುಧವಾರ ಹಟ್ಟಿಚಿನ್ನದಗಣಿ ಕಂಪನಿಗೆ ಭೇಟಿ ನೀಡಿತು.

ಒಂದು ಕಿಮೀ ಆಳದ ಗಣಿಗಿಳಿದ ಶಾಸಕರು ಚಿನ್ನ ಉತ್ಪಾದನೆ ಹಾಗೂ ಲೋಹ ವಿಭಾಗಕ್ಕೆ ತೆರಳಿ ವೀಕ್ಷಣೆ ಮಾಡಿದರು. ಲೋಹ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ವಿಧಾತ್ರಿ ಅವರು ಚಿನ್ನ ಸಂಸ್ಕರಣೆ ಕುರಿತು ಮಾಹಿತಿ ನೀಡಿದರು. ನಂತರ ಕಂಪನಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಭರವಸೆಗಳ ಸಂಖ್ಯೆ: 7622 ಮತ್ತು 7387 ವಿವರಣೆ ನೀಡಿದರು. ಕಂಪನಿಯ ನೌಕರ ಮೃತಪಟ್ಟ ಬಗ್ಗೆ ಚರ್ಚಿಸಿದರು. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೃತನ ಪತ್ನಿಗೆ ಮ್ಯಾನೇಜರ್ ಹುದ್ದೆ ನೀಡಲು ಕ್ರಮವಹಿಸಲಾಗುವುದು ಎಂದರು.

ಅಧ್ಯಕ್ಷ ಟಿ.ಎ.ಶರವಣ ಮಾತನಾಡಿ, ಇಂಥ ಘಟನೆಗಳು ಮರುಕಳಿಸದಂತೆ ಕಂಪನಿ ನೌಕರರ ಸುರಕ್ಷತೆಗೆ ಗಮನ ಹರಿಸಬೇಕು. ಕೆಲಸದ ವೇಳೆ ಪ್ರಾಣ ಕಳೆದುಕೊಂಡ ಸಂತ್ರಸ್ತರಿಗೆ ಕನಿಷ್ಠ 25 ಲಕ್ಷ ರೂ. ಪರಿಹಾರ ಧನ ನೀಡಲು ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ಸೂಚನೆ ನೀಡುತ್ತಿದೆ. 25 ಲಕ್ಷ ರೂ. ಪರಿಹಾರ ನೀಡುವಂತೆ ಬೋರ್ಡ್‌ಗೆ ಶಿಫಾರಸು ಮಾಡಲಾಗುವುದು. ಕಂಪನಿ ಆವರಣದಲ್ಲಿನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯುವಂತೆ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು.

ಕಂಪನಿಯಲ್ಲಿ ಯಂತ್ರಗಳು ಮಾಡುವ ಕೆಲಸನ್ನು ಮನುಷ್ಯರೇ ಮಾಡುತ್ತಿದ್ದಾರೆ. ನೌಕರರ ರಕ್ಷಣೆ ದೃಷ್ಟಿಯಿಂದ ಹೊಸ ತಂತ್ರಜ್ಞಾನ ಅಳವಡಿಸುವತ್ತ ಗಮನ ಹರಿಸಬೇಕು. 1,600 ಕೆಜಿ ಚಿನ್ನ ಉತ್ಪಾದನೆ ಆಗುತ್ತಿರುವುದು ಗಮನಾರ್ಹ ಸಂಗತಿ. ಇಲ್ಲಿ ಚಿನ್ನದ ಮಾರಾಟ ಪಾರದರ್ಶಕವಾಗಿ ನಡೆಯಬೇಕು. ಓಪನ್ ಮಾರ್ಕೇಟ್‌ನಲ್ಲಿ ಟೆಂಡರ್ ಮಾಡಿ, ವಿವರಗಳನ್ನು ಹೆಚ್ಚಿಗೆ ಪ್ರಚುರಪಡಿಸಿ. ನೈಜ ಚಿನ್ನದ ಎಜೇನ್ಸಿಗಳು, ಮಾರಾಟಗಾರರು ಭಾಗವಹಿಸುವಂತೆ ಪ್ರಕ್ರಿಯೆ ಶಿಸ್ತು ಬದ್ಧವಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿದರು.

ಪ್ರಮುಖರಾದ ಡಿ.ಎಸ್.ಅರುಣ, ಕೆ.ಎಸ್.ನವೀನ, ಮಂಜುನಾಥ ಭಂಡಾರಿ, ತಿಪ್ಪಣ್ಣಪ್ಪ ಕಮಕನೂರ ಇತರರಿದ್ದರು.