ಜಿಲ್ಲೆ

ಮಕ್ಕಳ ಚಟುವಟಿಕೆಗಳ ಮೇಲೆ ಗಮನಹರಿಸಿ

ಕಿರಣ್ ಗೌಡ.ಜಿ

ಗುಂಡ್ಲುಪೇಟೆ: ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಹೊಂದಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಶಿಧರ್ ಸಲಹೆ ನೀಡಿದರು.

ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಗುಂಡ್ಲುಪೇಟೆ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆ ಹಾಗೂ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ದಿಸೆಯಲ್ಲಿಯೇ ಮಾದಕ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತದೆ, ಈ ಬಗ್ಗೆ ಪಾಲಕರೂ ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಹರಿಸುವಂತಾಗಬೇಕು ಎಂದರು.

ಡಿವೈಎಸ್ಪಿ ಲಕ್ಷ್ಮಯ್ಯ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾನಸಿಕ ನೆಮ್ಮದಿಯೂ ಕೂಡ ಹಾಳಾಗುತ್ತದೆ. ಇತ್ತೀಚೆಗೆ ಯುವ ಸಮುದಾಯ ತಪ್ಪು ದಾರಿ ತುಳಿಯುತ್ತಿರುವ ನಿದರ್ಶನಗಳಿವೆ. ಈ ಹಿನ್ನೆಲೆಯಲ್ಲಿ ಸಾಗಣೆ, ಮಾರಾಟ, ಸೇವನೆ ಮೇಲೆ ನಿಗಾ ಇಡಲಾಗಿದೆ. ಸಾರ್ವಜನಿಕರು ಇಂತಹ ಸಮಾಜ ವಿರೋಧಿ ಕೃತ್ಯ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.

ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಾನಾ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪಟ್ಟಣ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್, ಬೇಗೂರು ಸರ್ಕಲ್ ಇನ್ಸ್‌ಪೆಕ್ಟರ್ ವನರಾಜು, ಸಬ್ ಇನ್ಸ್‌ಪೆಕ್ಟರ್‌ಗಳಾದ ಸಾಹೇಬಗೌಡ, ಕೆ.ಎಂ.ಮಹೇಶ್, ಮುಖ್ಯ ಶಿಕ್ಷಕಿ ನಾಗವೇಣಿ ಹಾಗೂ ಶಿಕ್ಷಕರು ಇದ್ದರು.