ಬಳ್ಳಾರಿ ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಆರೋಗ್ಯ ಸಂಘ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಎಚ್‌ಒ ಡಾ.ಎಚ್.ಎಲ್ ಜನಾರ್ದನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಇದ್ದರು.  
ಜಿಲ್ಲೆ

ಮಕ್ಕಳ ಆರೈಕೆಗೆ ಗಮನ ನೀಡಿ : ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸಲಹೆ

ಬಳ್ಳಾರಿ : ಜಿಲ್ಲೆಯ ಅಂಗನವಾಡಿ ಮತ್ತು ಶಾಲೆಗಳಲ್ಲಿ ತಪಾಸಣೆ ಕೈಗೊಂಡ ಮಕ್ಕಳ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯ ಆವರಣದಲ್ಲಿನ ಡಿಇಐಸಿ ಕೇಂದ್ರಕ್ಕೆ ದಾಖಲಿಸಿ, ಸೂಕ್ತ ಚಿಕಿತ್ಸೆ ಒದಗಿಸುವ ಮೂಲಕ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಆರೋಗ್ಯ ಸಂಘ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೈದ್ಯಕೀಯ ತಂಡಗಳು ಗುರುತಿಸಲ್ಪಟ್ಟ ಮಕ್ಕಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಮಗುವಿನ ಬೆಳವಣಿಗೆಗೆ ನಾಲ್ಕು ಪ್ರಮುಖ ನ್ಯೂನ್ಯತೆಗಳನ್ನು ಆರಂಭದಲ್ಲಿ ಗುರುತಿಸುವ ಕಾರ್ಯವನ್ನು ಆರ್‌ಬಿಎಸ್‌ಕೆ ವೈದ್ಯಕೀಯ ತಂಡ ಕೈಗೊಳ್ಳುತ್ತಾರೆ. ಜತೆಗೆ ಪಾಲಕರಿಗೆ ಸೂಕ್ತ ಮಾಹಿತಿ ನೀಡುತ್ತಾರೆ. ಇದರ ಜೊತೆಗೆ ಮೂರು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಗುವಿಗೆ ದೊರಕಬೇಕಾದ ಚಿಕಿತ್ಸೆ ಒದಗಿಸುವಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.

ಇಂದ್ರಧನುಷ್ ಲಸಿಕಾ ಕಾರ್ಯವನ್ನು ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ನಿಗದಿತ ಗುರಿ ಸಾಧಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್ ಜನಾರ್ದನ್ ಅವರು ಮಾತನಾಡಿ, ಜನಿಸಿದ 18 ವರ್ಷ ವಯಸ್ಸಿನ ಮಕ್ಕಳನ್ನು ಜನನದಲ್ಲಿನ ದೋಷಗಳು, ನ್ಯೂನತೆಗಳು, ರೋಗಗಳು ಮತ್ತು ಅಂಗವೈಕಲ್ಯ ಸೇರಿದಂತೆ ಬೆಳವಣಿಗೆಯ ವಿಳಂಬಗಳಿಗಾಗಿ ಪರೀಕ್ಷಿಸಲು ಮತ್ತು ನಿರ್ವಹಿಸಲು ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನೀರಿನ ಮೂಲಗಳ ಪರೀಕ್ಷೆ, ಸ್ಥಳೀಯ ಸಂಸ್ಥೆಗಳಿಗೆ ಶುದ್ಧೀಕರಣಕ್ಕಾಗಿ ತಾಂತ್ರಿಕ ಸಹಕಾರ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸಾ ಶಿಬಿರಗಳ ಆಯೋಜನೆ, ಮಲೇರಿಯಾ ತಪಾಸಣಾ ಶಿಬಿರಗಳ ಆಯೋಜನೆ, ಡೆಂೆ ಜಾಗೃತಿ ರಥ, ಅಂಧತ್ವ ಮುಕ್ತ ಬಳ್ಳಾರಿ ಅಭಿಯಾನ, ಆರೋಗ್ಯ ಸಿಂಚನ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿಗಳ ಸಹಕಾರ ಕುರಿತು ಧೀರ್ಘಕಾಲ ಚರ್ಚಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಹಾಗೂ ಎಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ವಿಮ್ಸ್ ವೈದ್ಯರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಮುಖ್ಯ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.