ರಾಯಚೂರು: ದಿನಗೂಲಿ ಪೌರ ಕಾರ್ಮಿಕರ ಮೂರು ತಿಂಗಳ ಬಾಕಿ ವೇತನ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕಳೆದ ಮೂರು ತಿಂಗಳಿಂದ ವೇತನವಿಲ್ಲದೆ ಕಾರ್ಮಿಕರು ಕುಟುಂಬ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ವೇತನ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪ್ರತಿ ತಿಂಗಳು ನಿಗದಿತ ವೇಳೆಗೆ ವೇತನ ಪಾವತಿಯಾಗುತ್ತಿದ್ದು, ಹೊಸ ಪೌರಾಯುಕ್ತರು ಬಂದ ಮೇಲೆ ಮೂರು ತಿಂಗಳ ವೇತನ ಪಾವತಿ ಮಾಡಲಾಗಿಲ್ಲ. ವೇತನವನ್ನು ನಂಬಿ ಜೀವನ ನಡೆಸುತ್ತಿರುವ ಕಾರ್ಮಿಕರು ಸಮಸ್ಯೆ ಎದುರಿಸುವಂತಾಗಿದೆ.
ಕಾರ್ಮಿಕರಿಗೆ ನಾಡಹಬ್ಬದ ಮುಂಗಡ ಹಣವನ್ನು ಪ್ರತಿವರ್ಷ ನೀಡಲಾಗುತ್ತಿದ್ದು, ಈ ವರ್ಷ ದಸರಾ ಹಬ್ಬದ ಮುಖಂಡ ಹಣವನ್ನು ಮಂಜೂರು ಮಾಡಬೇಕು. ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಭೀಮಯ್ಯ, ಪದಾಕಾರಿಗಳಾದ ಆನಂದ, ಪದ್ಮಾ, ಚೈತನ್ಯ, ಮಲ್ಲೇಶ, ನಾಗಪ್ಪ, ಆಂಜಿನೇಯ ಪೋತರಾಜ, ಆರ್.ಗೋವಿಂದ, ಎನ್.ನರಸಪ್ಪ, ಬೂದೆಪ್ಪ ಹಾಗೂ ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.