ಬಾಕಿ ವೇತನ ಪಾವತಿಗೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ನೇರ ಪಾವತಿ ಪೌರ ಸೇವಾ ನೌಕರರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಎಸ್.ಮಾರೆಪ್ಪ, ಪದಾಕಾರಿಗಳಾದ ನರಸಿಂಹಲು, ಆರ್.ಹನುಮಂತಪ್ಪ, ಮುತ್ತಪ್ಪ, ಉರುಕುಂದಪ್ಪ ಇದ್ದರು. 
ಜಿಲ್ಲೆ

ಪೌರ ಕಾರ್ಮಿಕರ ಬಾಕಿ ವೇತನ ಪಾವತಿಸಿ

ರಾಚಯ್ಯ ಸ್ವಾಮಿ

ರಾಯಚೂರು: ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಬಾಕಿ ವೇತನ ಪಾವತಿಸಬೇಕು. ಭರ್ತಿಯಾಗದೆ ಖಾಲಿ ಉಳಿದ 29 ಪೌರ ಕಾರ್ಮಿಕರ ಹುದ್ದೆಗಳಿಗೆ ನೇರ ವೇತನದಡಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ನೇರ ಪಾವತಿ ಪೌರ ಸೇವಾ ನೌಕರರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ನೇರ ಪಾವತಿ ಪೌರ ಕಾರ್ಮಿಕರನ್ನು ಬಿಟ್ಟು ದಿನಗೂಲಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಪರಿಗಣಿಸಬಾರದು ಎಂದು ಒತ್ತಾಯಿಸಿದರು.
ರಾಯಚೂರು ನಗರಸಭೆ ಸೇರಿದಂತೆ ಜಿಲ್ಲೆಯ ಇತರ ಸ್ಥಳೀಯ ಸಂಸ್ಥೆಗಳಲ್ಲಿನ 130 ನೇರ ವೇತನ ಕಾರ್ಮಿಕರನ್ನು ಕಾಯಂಗೊಳಿಸಲಾಗಿದ್ದು, ಏಪ್ರಿಲ್‌ನಿಂದ ಸಿರವಾರ, ಕವಿತಾಳ, ದೇವದುರ್ಗ, ಲಿಂಗಸುಗೂರು, ಹಟ್ಟಿಯಲ್ಲಿನ ಪೌರ ಕಾರ್ಮಿಕರಿಗೆ ಐದು ತಿಂಗಳಿಂದ ವೇತನ ಪಾವತಿಸಲಾಗಿಲ್ಲ.
ಮೀಸಲಾತಿ ಕಾರಣಕ್ಕೆ 29 ಪೌರ ಕಾರ್ಮಿಕ ಹುದ್ದೆಗಳು ಖಾಲಿಯಿದ್ದು, ಆ ಸ್ಥಾನಗಳಿಗೆ ನೇರ ವೇತನ ಪಾವತಿ ಕಾರ್ಮಿಕರನ್ನು ಮಾತ್ರ ಪರಿಗಣಿಸಬೇಕು. 2017ರಲ್ಲಿ ನೇಮಕಗೊಂಡು ಕೆಲಸ ಮಾಡದೆ ವೇತನ ಪಡೆಯುತ್ತಿರುವ ಪೌರ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬೇಕು.
ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ, ಸಮವಸ, ಮಾಸ್ಕ್ ಮತ್ತಿತರ ಸಾಮಗ್ರಿ ಒದಗಿಸಬೇಕು. ರಾಯಚೂರು ನಗರಸಭೆಯ ಪೌರ ಕಾರ್ಮಿಕರಿಗೆ ಅಕ್ಟೋಬರ್ 2022 ರಿಂದ ಮಾರ್ಚ್ 2023ರವರೆಗೆ ವ್ಯತ್ಯಾಸದ ವೇತನ ಪಾವತಿಸಬೇಕು. ಮರಣ ಹೊಂದಿದ ನೇರ ವೇತನ ಪೌರ ಕಾರ್ಮಿಕರ 6 ಕುಟುಂಬಗಳಿಗೆ ಅನುಕಂಪದ ಹುದ್ದೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಸ್.ಮಾರೆಪ್ಪ, ಪದಾಕಾರಿಗಳಾದ ನರಸಿಂಹಲು, ಆರ್.ಹನುಮಂತಪ್ಪ, ಮುತ್ತಪ್ಪ, ಉರುಕುಂದಪ್ಪ ಹಾಗೂ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.