ರೋಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಜನವರಿಯಿಂದ ಸಂಬಳ ಪಾವತಿಯಾಗದ ಕಾರಣ ಶೀಘ್ರ ಸಂಬಳ ಪಾವತಿಗೆ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಚಂದ್ರಶೇಖರ ಕಂದಕೂರ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯಾದ್ಯಂತ 3,632 ನರೇಗಾ ನೌಕರರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕಳೆದ ಆರು ತಿಂಗಳಿಂದ ಸಂಬಳವಿಲ್ಲದೇ ಸಿಬ್ಬಂದಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ, ಪ್ರಯಾಣ ಖರ್ಚು, ಸಾಲ ಮರುಪಾವತಿ, ಇಎಂಐ ಮುಂತಾದ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ತೊಂದರೆಯಾಗಿದೆ. ಆದ್ದರಿಂದ ಶೀಘ್ರ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಜೂನ್ 28 ಹಾಗೂ 30ರಂದು ನಡೆದ ಸಭೆಗಳ ತೀರ್ವನದಂತೆ ಜುಲೈ 7ರಿಂದ ಅನಿರ್ದಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತು ರಾಜ್ಯದಿಂದ ಜಿಲ್ಲೆಗೆ ಅನುದಾನ ಬಿಡುಗಡೆಯಾಗಿದ್ದರೂ ಹೊಸ ತಂತ್ರಾಂಶದ ತಾಂತ್ರಿಕ ಸಮಸ್ಯೆಯಿಂದಾಗಿ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಸಂಬಳ ಪಾವತಿಯಾಗದಿದ್ದರೆ ಕೆಲಸ-ಕಾರ್ಯ ನಿಲ್ಲಿಸಿ ಮುಷ್ಕರಕ್ಕೆ ಒಳಪಡಲಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಸಂತ ಅನವಾರಿ, ಶಾಂತಾ ತಿಮ್ಮರಡ್ಡಿ, ರೇಷ್ಮಾ ಕೇಲೂರ, ಯಲ್ಲಪ್ಪ ಗೊರವರ, ಪ್ರಕಾಶ ತಳವಾರ, ಮೋನೇಶ ದಂಡಿನ, ವಿದ್ಯಾ ಕುಂಬಾರ, ಕಾವೇರಿ ಅಸೂಟಿ, ಯಶೋದಾ ತಳವಾರ, ರೇಣುಕಾ ವಾಸನದ, ಸುಜಾತಾ ಮಡಿವಾಳರ ಇದ್ದರು.