ಜಿಲ್ಲೆ

6 ತಿಂಗಳ ವೇತನ ಪಾವತಿಸಿ

ವೀರೇಶ ಸೌದ್ರಿ

ರಟ್ಟಿಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ವೇತನ ಇಲ್ಲದಾಗಿದೆ. ಶೀಘ್ರವೇ ವೇತನ ಪಾವತಿಗೆ ಕ್ರಮ ಕೈಗೊಳ್ಳುವಂತೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಪಂ ಸಿಇಒ ಅಕ್ಷಯ ಶ್ರೀಧರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಕರಬಸಳ್ಳವರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 105 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಸಿಬ್ಬಂದಿಗೆ 2023 ಏಪ್ರಿಲ್‌ನಿಂದ ವೇತನ ಬಿಡುಗಡೆ ಆಗಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಕಷ್ಟಸಾಧ್ಯವಾಗುತ್ತಿದೆ. ವೇತನ ಪಾವತಿಯಾಗದ ಬಗ್ಗೆ 3 ಬಾರಿ ಮನವಿ ಸಲ್ಲಿಸಲಾಗಿದೆ ಎಂದರು.

ಮನವಿ ಸ್ವೀಕರಿಸಿದ ಸಿಇಒ, ಈಗಾಗಲೇ ಮನವಿಯನ್ನು ರಾಜ್ಯ ಆಯುಕ್ತರಿಗೆ ಸಲ್ಲಿಸಲಾಗಿದೆ. ಶೀಘ್ರವೇ ಮತ್ತೊಮ್ಮೆ ಅವರ ಗಮನಕ್ಕೆ ತರಲಾಗುವುದು ಎಂದರು.

ಸಂಘದ ಗೌರವಾಧ್ಯಕ್ಷ ಮೃತ್ಯುಂಜಯ ಪಾಟೀಲ, ಉಪಾಧ್ಯಕ್ಷ ಕಿರಣಕುಮಾರ ಕೆ.ಎಂ., ಖಜಾಂಚಿ ಮಂಜುನಾಥ ದೊಡ್ಡಗೌಡರ, ಸದಸ್ಯರಾದ ಭರಮಪ್ಪ ಕಡೇಮನಿ, ಬಸವನಗೌಡ ಪಾಟೀಲ, ಸಿದ್ದಲಿಂಗಮ್ಮ ಸಿರಿಗೇರಿ, ಶಶಿಕಲಾ ಪಾಟೀಲ, ಸುನೀತಾ ವಡಯನಪುರ, ಹಾಲಪ್ಪ ಎ.ವಿ. ಸಿಬ್ಬಂದಿ ಉಪಸ್ಥಿತರಿದ್ದರು.