ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಒಂದೂವರೆ ತಿಂಗಳ ಹಿಂದೆ ಕಸ ಸಂಗ್ರಹ ಆರಂಭಗೊಂಡಿದ್ದು ಮೊದಲ ತಿಂಗಳಲ್ಲೇ ನಗರ ಪ್ರದೇಶದಲ್ಲೂ ಆಗದ ರೀತಿಯಲ್ಲಿ 70 ಸಾವಿರ ರೂ. ಶುಲ್ಕ ಸಂಗ್ರಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆಯಲ್ಲಿ ಮಾದರಿಯಾಗುವ ಆಶಾಭಾವನೆ ಹೊಂದಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಹೇಳಿದರು.
ಪಾವೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಎಸ್ಕೆಎಸ್ಸೆಸ್ಸೆಫ್ ವಿಖಾಯ, ಎಸ್ಸೆಸ್ಸೆಫ್, ಎಸ್‌ವೈಎಸ್, ಸಂಜೀವಿನಿ ಒಕ್ಕೂಟ, ಅಲೋಶಿಯಸ್ ಕಾಲೇಜಿನ ರಾಷ್ಟ್ರೀಯ ಸೇವಾದಳ, ಹಸಿರುದಳ, ಎಸ್‌ಡಿಪಿಐ, ಶಿವಾಜಿ ಭಂಡಾರಮನೆ, ಅಂಗನವಾಡಿ ಕಾರ್ಯಕರ್ತೆಯರ ಪಾಲ್ಗೊಳ್ಳುವಿಕೆಯಲ್ಲಿ ಭಾನುವಾರ ಗ್ರಾಮಾದ್ಯಂತ ಏಕಕಾಲದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸ್ವಚ್ಛತಾ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಪಂ ಸದಸ್ಯ ಮಹಮ್ಮದ್ ಅನ್ಸಾರ್ ಇನೋಳಿ ಮಾತನಾಡಿ, ಈಗಾಗಲೇ ಒಂದೂವರೆ ಸಾವಿರ ಮನೆಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದ್ದು, ಶೇ.80 ಮನೆಗಳಿಂದ ಮಾಸಿಕ ಶುಲ್ಕ ಸಂಗ್ರಹಿಸಲಾಗಿದೆ. ಹೀಗೇ ಮುಂದಯವರಿದರೆ ಮುಂದಿನ ದಿನಗಳಲ್ಲಿ ಶೂನ್ಯ ಶುಲ್ಕ ಆಗುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಅಲೋಶಿಯಸ್ ಕಾಲೇಜಿನ ಪ್ರತಿನಿಧಿ ಆಲ್ವಿನ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ್ ಕೆ., ಕಾರ್ಯದರ್ಶಿ ಇಸ್ಮಾಯಿಲ್, ಉಪಾಧ್ಯಕ್ಷೆ ಮೆಹರುನ್ನಿಸಾ, ಹರೇಕಳ ಗ್ರಾಪಂ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಗಂಗಾ ಸಂಜೀವಿನಿ ಒಕ್ಕೂಟದ ಕಾಂಚನಾ, ಪಾವೂರು ಗ್ರಾ.ಪಂ. ಸದಸ್ಯರಾದ ದಯಾನಂದ, ರಿಯಾಝ್ ಅಹ್ಮದ್ ಗಾಡಿಗದ್ದೆ, ರಿಝ್ವನ್ ಮಲಾರ್, ರವಿಕಲಾ, ಚೆನ್ನಮ್ಮ, ಖತೀಜಾ ಬಾನು ಮೊದಲಾದವರು ಉಪಸ್ಥಿತರಿದ್ದರು. ಹಸಿರುದಳದ ಸಂಯೋಜಕ ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು.