ಪಾವಗಡ : ನಾಗಲಮಡಿಕೆಯ ಕೃಷ್ಣಾ ನದಿ ನೀರಿನ ಪೈಪ್‌ಲೈನ್ ಮೂಲಕ ಪಟ್ಟಣದ ಅಗಸರಕುಂಟೆ ಕೆರೆಗೆ ಹರಿಯುತ್ತಿರುವ ನೀರು ಸೋರಿಕೆಯಾಗುತ್ತಿದೆ. ದಶಕಗಳ ಹೋರಾಟದ ಫಲವಾಗಿ ಕೃಷ್ಣಾ ನದಿಯಿಂದ ಹರಿಯುತ್ತಿರುವ ನೀರನ್ನು ಶೇಖರಣೆ ಮಾಡಲು ವಿಫಲವಾಗಿರುವ ಪುರಸಭೆ ಪೋಲಾಗುತ್ತಿದ್ದರೂ ಎಚ್ಚೆತ್ತುಕೊಂಡಿಲ್ಲ.
ಈ ಹಿಂದೆ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಏರಿ ಕೆಳಗೆ ಕಲ್ಲುಕಟ್ಟುವುದು ಮತ್ತು ಕೆರೆ ಏರಿ ಅಂಗಳದಲ್ಲಿ ಕಟಾಫ್ ಟ್ರಂಚ್ ಫಿಲ್ಲಿಂಗ್ ಮಾಡಿಸಲಾಗಿತ್ತು. ಆದರೆ, ಮಳೆ ಇಲ್ಲದ ಕಾರಣ ಕೆರೆ ಬತ್ತಿದೆ. ಕೆರೆಯ ಅಂಗಳದಲ್ಲಿರುವ ಮಣ್ಣು ಸಾಗಿಸಿದ್ದರಿಂದ ಕೆರೆ ನೀರು ಸೋರಿಕೆಯಾಗುತ್ತಿದೆ.
ನಾಗಲಮಡಿಕೆಯ ಉತ್ತರಪಿನಾಕಿನಿ ಹಳ್ಳದಲ್ಲಿ ತಡೆಗೋಡೆ ನಿರ್ಮಿಸಿದ್ದು, ಆಂಧ್ರದ ಪೇರೂರು ಡ್ಯಾಂಗೆ ಶ್ರೀಶೈಲ ಡ್ಯಾಂನಿಂದ ನೀರು ಹರಿಸುತ್ತಿದ್ದು, ಈ ನೀರನ್ನು ಪಾವಗಡ ಅಗಸರಕುಂಟೆಗೆ ತುಂಬಿಸಿಕೊಳ್ಳಲಾಗುತ್ತಿದೆ. ಅಗಸರಕುಂಟೆ ಕೆರೆ ತುಂಬಿ ಸುತ್ತಮುತ್ತಲಿನ ಕೊಳವೆಬಾವಿಗಳ ಅಂತರ್ಜಲ ಹೆಚ್ಚಾಗುತ್ತಿದೆ, ಆದರೆ ಈ ನೀರನ್ನು ಹಿಡಿದಿಟ್ಟುಕೊಳ್ಳಲು ಪುರಸಭೆ ವಿಫಲವಾಗಿದೆ.
ಐಟಿಐ ಕಾಲೇಜಿಗೆ ನೀರು : ಸರ್ಕಾರಿ ಐಟಿಐ ಕಾಲೇಜಿಗೆ ಕೆರೆ ನೀರು ನುಗ್ಗ್ಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಕೆರೆ-ಕಟ್ಟೆಯ ಕೆಳಗೆ 30 ಅಡಿ ಅಂತರದಲ್ಲಿ ಕಾಲುವೆ ತೆಗೆದು ಜಿನುಗುವ ನೀರನ್ನು ಕಾಲುವೆ ಮೂಲಕ ಪಟ್ಟಣದ ರಾಜಕಾಲುವೆಗೆ ಹರಿ ಬಿಡಬೇಕಾಗಿದೆ. ಆದರೆ ಎರಡು ತಿಂಗಳಿಂದಲೂ ಈ ನೀರು ಪೋಲಾಗುತ್ತಿದ್ದರೂ ಕ್ರಮಕೈಗೊಂಡಿಲ್ಲ.
ಕೆರೆ ಒತ್ತುವರಿ ತಪ್ಪಿಸಿ, ಏರಿ ಬಲಪಡಿಸಬೇಕು. ಏರಿಗೆ ಹುಲ್ಲು ಹೆಪ್ಪು ಕಟ್ಟುವ ಕಾಮಗಾರಿ ಮಾಡಬೇಕು. ಏರಿ ಮೇಲೆ ಬೇಲಿ ನಿರ್ಮಾಣ ಮಾಡಿ ಕೆರೆಯ ಪಕ್ಕದಲ್ಲಿರುವ ಜಮೀನು ಪಡೆದು ಪಾರ್ಕ್ ನಿರ್ಮಿಸಬೇಕು. ವಿದ್ಯುತ್ ದೀಪ ಅಳವಡಿಸಬೇಕು ಎಂಬುದು ಪರಿಸರವಾದಿಗಳ ಆಗ್ರಹ.
ಕೆರೆಯಿಂದ ಜಿನುಗುವ ನೀರು ಹರಿಯಲು ವ್ಯವಸ್ಥೆ ಮಾಡಿಕೊಡಲಾಗುವುದು. ಕೆರೆ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಬಿ.ಸಿ.ಅರ್ಚನಾ, ಮುಖ್ಯಾಧಿಕಾರಿ ಪುರಸಭೆ ಪಾವಗಡ ಕೆರೆಯಲ್ಲಿ ನೀರು ಜೋಗು ಹರಿದು ಹೋಗುತ್ತಿದ್ದು, ಮೂಲಕಾಲುವೆ ಮೂಲಕ ನೀರು ಹರಿಸಿದರೆ ಸಮಸ್ಯೆ ಇರುವುದಿಲ್ಲ. ಎಂ.ಗಂಗಾಧರಪ್ಪ, ಸಾಲುಮರದ ತಿಮ್ಮಕ್ಕ ಸಸ್ಯೋಧ್ಯಾನ ಸಂರಕ್ಷಣಾ ಸಮಿತಿ ಸದಸ್ಯ