ಜಿಲ್ಲೆ

ಕೃಷಿ ಇಲಾಖೆಯಲ್ಲಿ ಕೆಲಸ ಮಾಡೋರಿಲ್ಲ ; ಪಾವಗಡದಲ್ಲಿ 21 ಹುದ್ದೆಯ ಪೈಕಿ 17 ಖಾಲಿ ; 1039 ರೈತರಿಗೆ ಬೆಳೆಹಾನಿ ಪರಿಹಾರ

Tumakuru

ಪಾವಗಡ : ಕೇಂದ್ರೀಯ ಒಣ ವಲಯ ಹಾಗೂ ನಂಜುಂಡಪ್ಪ ವರದಿ ಪ್ರಕಾರ ಬರಪೀಡಿತ ತಾಲೂಕು ಪಟ್ಟಿಯಲ್ಲಿರುವ ಪಾವಗಡ ತಾಲೂಕಿನ ರೈತರಿಗೆ ಸರ್ಕಾರದ ಸೌಲಭ್ಯಗಳು ಲಭ್ಯವಾಗದಿರುವುದು ಕೃಷಿಯನ್ನು ಮತ್ತಷ್ಟು ಕುಗ್ಗಿಸಿದೆ.

ಇತ್ತೀಚೆಗೆ ಸುರಿದಿದ್ದ ಭಾರಿ ಮಳೆಗೆ ಸಾವಿರಾರು ಹೆಕ್ಟೇರ್ ಬೆಳೆ ನಾಶವಾಗಿದ್ದರೂ 270 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿ ನೀಡಿರುವುದು ಸಾವಿರಾರು ರೈತರು ಪರಿಹಾರದಿಂದ ವಂಚಿತರಾಗುವಂತೆ ಮಾಡಿದೆ. ತಾಲೂಕಿನ 375 ರೈತರಿಗೆ 28.26ಲಕ್ಷ ರೂಪಾಯಿ ಬೆಳೆನಷ್ಟ ಪರಿಹಾರ ಕೃಷಿ ಇಲಾಖೆಯಿಂದ ಬಂದಿದ್ದು, ಇನ್ನುಳಿದ ರೈತರ ಹೊಲಗಳ ನೈಜ ವರದಿ ನೀಡದಿರುವ ಕಾರಣಕ್ಕೆ ರೈತರು ಪರಿಹಾರದಿಂದ ವಂಚಿತರಾಗುವಂತೆ ಆಗಿದೆ.

664 ರೈತರ 454ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ವರದಿ ನೀಡಿ ಕೈತೊಳೆದುಕೊಂಡಿದೆ. ಇದರ ಪೈಕಿ 62.45ಲಕ್ಷ ಪರಿಹಾರ ಸಿಕ್ಕಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ತಾಲೂಕಿಗೆ 94.22 ಲಕ್ಷ ರೂ. ಮಾತ್ರ ಪರಿಹಾರ ಬಂದಿದ್ದು ಇನ್ನೂ ಸಾವಿರಾರು ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಪಾವಗಡ ರೈತರು ಬೆಳೆ ಕಳೆದುಕೊಂಡಿರುವ ಬಗ್ಗೆ ವಾಸ್ತವ ವರದಿ ನೀಡಲು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಂಪೂರ್ಣ ವಿಫಲವಾಗಿದ್ದು ರೈತರು ಹಿಡಿಶಾಪ ಹಾಕುತ್ತಿದ್ದಾರೆ.

21 ಹುದ್ದೆಯ ಪೈಕಿ 17 ಖಾಲಿ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ, ಇರುವ ಸಿಬ್ಬಂದಿ ಕೂಡ ಕಚೇರಿಯಲ್ಲಿ ಹಾಜರಿರುವುದು ಕಡಿಮೆ. ತಾಲೂಕಿನಲ್ಲಿ ಮಂಜೂರು ಮಾಡಲಾಗಿರುವ 21 ಹುದ್ದೆಗಳ ಪೈಕಿ 4 ಹುದ್ದೆ ಕಾರ್ಯನಿರ್ವಹಿಸುತ್ತಿವೆ.

ಒಬ್ಬರು ಕೃಷಿ ಅಧಿಕಾರಿ, ಇಬ್ಬರು ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಒಬ್ಬರು ಸಹಾಯಕ ಕೃಷಿ ನಿರ್ದೇಶಕ ಹುದ್ದೆ ಮಾತ್ರವಿದ್ದು ರೈತ ಸಂಪರ್ಕ ಕೇಂದ್ರದಲ್ಲಿಯೂ ಅಗತ್ಯ ಮಾಹಿತಿ ನೀಡಲು ಸಿಬ್ಬಂದಿ ಇಲ್ಲ. ತಾಲೂಕಿನಲ್ಲಿ ಇನ್ನೂ 17 ಹುದ್ದೆ ಖಾಲಿಯಿದ್ದು ಈ ಬಗ್ಗೆ ಇಲಾಖೆ ಗಮನಹರಿಸಬೇಕಿದೆ.

ರಾಗಿ ಖರೀದಿ ಕೇಂದ್ರವಿಲ್ಲ! ; ತಾಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದ್ದರೂ ರಾಗಿ ಕೂಡ ಬೆಳೆಯಲಾಗುತ್ತಿದೆ. ತಾಲೂಕಿನ 184 ಹೆಕ್ಟೇರ್ ಭೂ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದ್ದರೂ ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರ ತೆರೆಯದಿರುವುದರಿಂದ ರೈತರು ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡದಂತಾಗಿದೆ. ತಾಲೂಕು ಕೇಂದ್ರದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಾದರೂ ರಾಗಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರೈತರು ಮನವಿ ಮಾಡಿದ್ದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಈವರೆಗೂ ಮಾಹಿತಿ ನೀಡುತ್ತಿಲ್ಲ.

ರೈತರಿಗೆ ಪರಿಹಾರ ತಪ್ಪಿಸಿದ ಕೃಷಿ ಇಲಾಖೆ ವರದಿ! ; ಪಾವಗಡ ತಾಲೂಕು 1.35 ಲಕ್ಷ ಹೆಕ್ಟೇರ್ ಭೌಗೋಳಿಕ ಪ್ರದೇಶ ಹೊಂದಿದ್ದು, 76698 ಹೆ. ಕೃಷಿ ಸಾವಯವ ಭೂಮಿ ಹೊಂದಿದೆ. ಈ ಪೈಕಿ ಮಳೆಯನ್ನೇ ನಂಬಿಕೊಂಡು 52534ಹೆ. ಪ್ರದೇಶದಲ್ಲಿ ಕೃಷಿ ನಡೆಯುತ್ತಿದೆ. ಶೇಂಗಾ ಪ್ರಮುಖ ಬೆಳೆಯಾಗಿದ್ದು 57 ಸಾವಿರ ಹೆಕ್ಟೇರ್‌ನಲ್ಲಿ ಬೆಳೆದು ಸಾವಿರಾರು ಹೆ.ಪ್ರದೇಶದಲ್ಲಿ ಬೆಳೆ ಕಳೆದುಕೊಂಡಿದ್ದರೂ ಹಾನಿಯ ಪರಿಹಾರ ಸಿಕ್ಕಿಲ್ಲ.

ಸಿಬ್ಬಂದಿ ಕೊರತೆಯಿಂದ ಇಲಾಖೆ ಕಾರ್ಯಕ್ರಮಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ, ತಾಲೂಕಿನಲ್ಲಿ ಪರಿಶಿಷ್ಟ ಸಮುದಾಯದ ರೈತರ ಸಂಖ್ಯೆಯೇ ಹೆಚ್ಚಾಗಿದ್ದು, ಎಲ್ಲರಿಗೂ ಸೌಲಭ್ಯ ಒದಗಿಸಲು ಹೆಚ್ಚು ಅನುದಾನದ ಅಗತ್ಯವಿದೆ. ಈ ಬಗ್ಗೆ ಇಲಾಖೆ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ವಿಜಯಾಮೂರ್ತಿ ಸಹಾಯಕ ಕೃಷಿ ನಿರ್ದೇಶಕಿ, ಪಾವಗಡ