ಪಾವಗಡ : ಜನಸಾಮಾನ್ಯರ ಹಾಗೂ ರೈತರ ನಡುವೆ ಅಧಿಕಾರಿಗಳು ಸ್ನೇಹ ಸೌಹಾರ್ದದಿಂದ ವರ್ತಿಸಿ, ಅವರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಮಧುಗಿರಿ ಎಸಿ ಸೋಮಪ್ಪ ಕಡಕೋಳ ಸೂಚಿಸಿದರು.
ತಾಲೂಕಿನ ಕೋಟಬಂಡೆಯಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಪ್ರತಿದಿನ ಸಾವಿರಾರು ಜನ ಇಲಾಖೆಗಳ ಬಳಿ ಕುಂದುಕೊರತೆ ಹೇಳಿಕೊಳ್ಳಲು ಬರುತ್ತಾರೆ. ಅವರೊಂದಿಗೆ ಸ್ನೇಹದಿಂದ ವರ್ತಿಸಿ, ಅವರೆಲ್ಲರ ಸಮಸ್ಯೆಗಳನ್ನು ಪರಿಹರಿಸಿ ಎಂದು ಸಲಹೆ ನೀಡಿದರು.
ನಾನು ಮೂಲತಃ ಗ್ರಾಮೀಣ ಭಾಗದಿಂದ ಬಂದವನು. ಹಾಗಾಗಿ ನಿಮ್ಮ ಭಾವನೆಗಳು ಅರಿವಾಗುತ್ತವೆ. ನೀವು ಹಿಂಜರಿಯದೆ ನಿಮ್ಮ ಸಮಸ್ಯೆಯನ್ನು ಲಿಖಿತವಾಗಿ ಹಂಚಿಕೊಳ್ಳಿ. ಪ್ರತಿಯೊಬ್ಬರೂ ಎಲ್ಲ ಇಲಾಖೆಗಳ ನೂತನ ಯೋಜನೆಗಳ ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಕೆ.ಆರ್.ನಾಗರಾಜ್ ಮಾತನಾಡಿ, ಜನರಿಗೆ ಕುಡಿಯುವ ನೀರು, ಸಾರಿಗೆ, ರಸ್ತೆ, ನಿವೇಶನದಂಥ ಮೂಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಎಲ್ಲ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸುವ ಕಾರ್ಯವೇ ಇಂದಿನ ಗ್ರಾಮ ವಾಸ್ತವ್ಯದ ಉದ್ದೇಶ ಎಂದು ವಿವರಿಸಿದರು. ಭೂಮಾಪನ ಇಲಾಖೆ ಅಧಿಕಾರಿ ಕೃಷ್ಣಪ್ಪ ಹಾಗೂ ಕೃಷಿ ಇಲಾಖೆ ಅಧಿಕಾರಿ ವಿಜಯಮೂರ್ತಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ತಿರುಪತಯ್ಯ ಸೇರಿ ಹಲವು ಅಧಿಕಾರಿಗಳು ಜನರಿಂದ ಅಹವಾಲು ಸ್ವೀಕರಿಸಿದರು.
ಸುತ್ತಮುತ್ತಲ ಗ್ರಾಮಗಳ ಜನರು ಅಹವಾಲುಗಳನ್ನು ಸಲ್ಲಿಸಿದರು. ನಂತರ ಅಧಿಕಾರಿಗಳು ಇಲಾಖಾವಾರು ಜನರ ಕುಂದು-ಕೊರತೆಗಳನ್ನು ಬಗೆಹರಿಸಲು ಕ್ರಮ ಕೈಗೊಂಡರು. ಬ್ಯಾಡನೂರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ, ಉಪಾಧ್ಯಕ್ಷೆ ಅಕ್ಕಮ್ಮ, ಜೆಡಿಎಸ್‌ನ ಬಲರಾಮರೆಡ್ಡಿ, ರಾಜ್ಯ ರೈತ ಮತ್ತು ಹಸಿರು ಸೇನೆ ಸಂಘದ ಅಧ್ಯಕ್ಷ ಪೂಜಾರಪ್ಪ, ಪಾವಗಡ ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮತ್ತಿತರರಿದ್ದರು.
ಕೆರೆಯನ್ನು ಅಭಿವೃದ್ಧಿ ಪಡಿಸಿ ; ವಾಸ್ತವ್ಯದ ಗ್ರಾಮ ಕೋಟಬಂಡೆಯಲ್ಲಿ ಬೀದಿದೀಪ, ನಿವೇಶನದ ಕೊರತೆ, ಶುದ್ಧ ನೀರಿನ ಘಟಕ ನಿರ್ಮಾಣವಾಗಬೇಕಿದೆ. ಬೆಸ್ಕಾಂನವರು ಅಕ್ರಮ-ಸಕ್ರಮದಲ್ಲಿ ರೈತರಿಗೆ ಅನುಕೂಲ ಕಲ್ಪಿಸದೆ ಸತಾಯಿಸುತ್ತಿದ್ದಾರೆ. ಗುಂಡಾರ್ಲಹಳ್ಳಿ ಕೆರೆ ಭರ್ತಿಯಾಗಿದ್ದರೂ ಕೆರೆ-ಕಟ್ಟೆ ಒಡೆದು ನೀರು ಪೊಲಾಗುತ್ತಿದೆ. ಕೆರೆ ಅಭಿವೃದ್ಧಿಪಡಿಸಿದರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದು ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ತಿಳಿಸಿದರು.
ಅರ್ಹತೆಯುಳ್ಳವರು ಸೂಕ್ತ ದಾಖಲೆ ತಂದರೆ ಅನುಕೂಲವಾಗುವಂತೆ ಕೆಲಸ ಮಾಡಿಕೊಡಲಾಗುವುದು. ಯಾವುದೇ ಕುಂದು ಕೊರತೆಗಳ ಮಾಹಿತಿ ಇದ್ದರೆ ಮುಕ್ತವಾಗಿ ಸಲಹೆ ಸೂಚನೆ ನೀಡಲಾಗುವುದು. ಸುಮತಿ, ಗ್ರೇಡ್ 2 ತಹಸೀಲ್ದಾರ್