ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಚಿಕ್ಕಮೂಗಯ್ಯ, ಹಾರೋಹಳ್ಳಿ ಸೋಮು, ಚಿಕ್ಕಹನುಮ ಇದ್ದ 
ಜಿಲ್ಲೆ

ಪಾಂಡವಪುರ ತಾಲೂಕು ಕಚೇರಿ ಎದುರು ಪಟ್ಟಸೋಮನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಪಾಂಡವಪುರ: ಪೂರ್ವಿಕರ ಕಾಲದಿಂದಲೂ ಶವ ಸಂಸ್ಕಾರ ನಡೆಸುತ್ತಿದ್ದ ಸ್ಥಳದಲ್ಲಿ ಹೆಣ ಹೂಳಲು ಅವಕಾಶ ಕೊಡುತ್ತಿಲ್ಲ ಎಂದು ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದ ದಲಿತರು ತಾಲೂಕು ಕಚೇರಿ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಸರ್ಕಾರಿ ಜಾಗದಲ್ಲಿ ಶವಸಂಸ್ಕಾರ ನಡೆಸಲು ತಡೆ ಒಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ದಲಿತರ ಶವ ಹೂಳಲು ಅವಕಾಶ ಮಾಡಿಕೊಡಬೇಕು ಎಂದು ತಹಸೀಲ್ದಾರ್ ಎಸ್.ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಹೊರವಲಯದ ಲೋಕಪಾವನಿ ನದಿಯ ತಟದಲ್ಲಿರುವ ಸರ್ಕಾರಿ ಜಾಗದಲ್ಲಿ ಪೂರ್ವಿಕರ ಕಾಲದಿಂದಲೂ ಯಾವುದೇ ಅಡ್ಡಿ ಇಲ್ಲದೆ ಶವ ಸಂಸ್ಕಾರ ಮಾಡಲಾಗುತ್ತಿತ್ತು. ಇತ್ತೀಚೆಗೆ ಪಕ್ಕದ ಜಮೀನಿನ ಮಾಲೀಕ ಶವ ಹೂಳಲು ಅವಕಾಶ ನೀಡುತ್ತಿಲ್ಲ. ಜತೆಗೆ ಶವ ಸಂಸ್ಕಾರಕ್ಕೆ ಮೀಸಲಿದ್ದ ಜಮೀನಿನಲ್ಲಿ ತೆಂಗಿನಮರ ಹಾಗೂ ಇತರ ತರಕಾರಿ ಸಸಿಗಳನ್ನು ನೆಟ್ಟು ತೊಂದರೆ ಕೊಡುತ್ತಿದ್ದಾರೆ. ಇದರಿಂದ ದಲಿತ ಜನಾಂಗಕ್ಕೆ ಶವ ಸಂಸ್ಕಾರ ನಡೆಸಲು ತೊಂದರೆಯಾಗುತ್ತಿದೆ. ಹೀಗಾಗಿ ಶವ ಸಂಸ್ಕಾರ ನಡೆಸಲು ನಿಗದಿಯಾಗಿರುವ ಜಮೀನಿನಲ್ಲಿ ಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಸ್.ಸಂತೋಷ್, ಅ.29 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಮಶಾನ ಜಾಗ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಹಾರೋಹಳ್ಳಿ ಸೋಮು, ಚಿಕ್ಕಮೂಗಯ್ಯ, ಮಲ್ಲೇಶ, ಮಹದೇವು, ಕುಮಾರ, ಅಶೋಕ, ಶಂಕರ, ರವಿ, ಧನಂಜಯ, ಶಶಿ, ಚಿಕ್ಕಹನುಮ, ಸಾವಿತ್ರಮ್ಮ, ದೇವಮ್ಮ, ದೇವಿಕ, ರಾಜ, ವಿಜಿ, ಪುಟ್ಟ ಇತರರು ಇದ್ದರು.