ಜಿಲ್ಲೆ

ಅಮೆರಿಕಾದಲ್ಲಿ ಯಕ್ಷಗಾನಕ್ಕೆ ಸಿಕ್ಕ ಗೌರವ ಅವಿಸ್ಮರಣೀಯ : ಭಾಗವತ ಪಟ್ಲ ಸತೀಶ್ ಶೆಟ್ಟಿ

Mangaluru - Hariprasad Rai



ಮಂಗಳೂರು : ಅಮೆರಿಕಾ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜತೆ ಮಂಗಳವಾರ ರಾತ್ರಿ ಮಂಗಳೂರಿಗೆ ಮರಳಿದ್ದು ವಿಮಾನ ನಿಲ್ದಾಣದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಸ್ವಾಗತ ಕೋರಿದರು.
ಈ ಸಂದರ್ಭ ಪಟ್ಲ ಸತೀಶ್ ಶೆಟ್ಟಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ‘ ವಿದೇಶದಲ್ಲಿ ಕರಾವಳಿಯ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನ ಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ . ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದರು. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ ಎಂದರು.
ಕಲಾವಿದ ಪ್ರೊ.ಎಂ.ಎಲ್. ಸಾಮಗ ಮಾತನಾಡಿ, ಅಮೆರಿಕಾದ ಜನರು ನಮ್ಮ ಯಕ್ಷಗಾನ ತಂಡದ ಮೇಲೆ ತೋರಿಸಿದ ಪ್ರೀತಿ ಮರೆಯಲಾಗದ್ದು. ಪ್ರತೀ ಪ್ರದರ್ಶನಕ್ಕೂ 500 ಜನರಿಗಿಂತ ಕಡಿಮೆ ಜನರು ಸೇರುತ್ತಿರಲಿಲ್ಲ. ಕೆಲವರು ತಾವು ವೇಷ ಹಾಕುತ್ತೇವೆ ಎಂದು ಮುಂದೆ ಬಂದರು ಮತ್ತೂ ಕೆಲವರು ಭಾಗವತಿಕೆ ಕಲಿಯಲು ಮುಂದೆ ಬಂದರು. ಆನ್‌ಲೈನ್ ಕ್ಲಾಸ್ ಬಗ್ಗೆಯೂ ವಿಚಾರಿಸಿದ್ದಾರೆ ಎಂದರು.
ಪಟ್ಲ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ಎಂಎಲ್‌ಸಿ ಕ್ಯಾ.ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೇರಿಕ ದೇಶದ ಬೇರೆ ಬೇರೆ ತಾಣಗಳಲ್ಲಿ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಡಿಗೆ ಮರಳಿದೆ.