ಬೆಂಗಳೂರು: ರಾಜ್ಯ ಸರ್ಕಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ನಿಯಂತ್ರಿಸುತ್ತಿವೆ. ಅಲ್ಪರಿಗೆ ಐಶ್ವರ್ಯ ಬಂದಾಗ ಅದೇನೋ ಹೇಳ್ತಾರಲ್ಲ.. ಎಂಬ ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಏಟಿಗೆ, ‘ಅಧಿಕಾರವಿಲ್ಲದೆ ನೀವಿರಲಾರಿರಿ ಎಂಬುದು ನಮಗೆ ಗೊತ್ತು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಮಂಗಳವಾರ ಭೋಜನ ವಿರಾಮದ ನಂತರ ಪರಿಷತ್ ಕಲಾಪದಲ್ಲಿ ಗಮನಸೆಳೆಯುವ ಸೂಚನೆಯಡಿ ಎಸ್.ಆರ್. ಪಾಟೀಲ್ ಮಾತು ಮುಂದುವರಿಸಿ, ಮಂಗಳೂರು ಹಿಂಸಾಚಾರ, ಗೋಲಿಬಾರ್ಗೆ ಪೊಲೀಸರ ವೈಫಲ್ಯ ಕಾರಣವೆಂದು ಆರೋಪಿಸಿದರು. ‘ಕಾನೂನುಗಳನ್ನು ಸರಿಯಾಗಿ ಬಳಸಿದ್ದೇವೆಯೋ ಇಲ್ಲವೋ ಎನ್ನುವುದರ ಬಗ್ಗೆ ವಿವರಿಸಿ. ಪರಿಸ್ಥಿತಿ ನಿಭಾಯಿಸಲು, ಉತ್ತರ ಕೊಡಲು ಇಲಾಖೆ ಸಮರ್ಥವಾಗಿದೆ. ಪ್ರತಿಯೊಂದು ಗೋಲಿಬಾರ್ಗೆ ತನ್ನದೇ ಇತಿಹಾಸವಿದೆ, ಪ್ರತಿ ಘಟನೆಯು ಪಾಠ ಕಲಿಸುತ್ತದೆ’ ಎಂದು ಬೊಮ್ಮಾಯಿ ತಿವಿದರು. ವಾಮಮಾರ್ಗದಿಂದ ಅಧಿಕಾರ ಗಿಟ್ಟಿಸಿಕೊಂಡಿರಿ, ಸಾವಿರಾರು ಕೋಟಿ ರೂ. ಸುರಿದೀದ್ದಿರಿ ಎಂದು ಪಾಟೀಲ್ ತಿರುಗೇಟು ಕೊಟ್ಟರು. ಆಡಳಿತ ಪಕ್ಷದ ಸಾಲಿನಿಂದ ವಾಮಮಾರ್ಗ ಅಲ್ಲ ಸರ್, ರಾಮಮಾರ್ಗವೆಂಬ ಧ್ವನಿ ಎಂದು ಕೇಳಿಬಂದಾಗ ಅಯ್ಯೋ ರಾಮ ಇಲ್ಯಾಕೆ ಬಂದ ಎಂದು ಪ್ರತಿಪಕ್ಷ ಸದಸ್ಯರು ಕಿಚಾಯಿಸಿದರು.
ಮಂಗಳೂರು ಪ್ರವೇಶ ನಿರ್ಬಂಧವನ್ನು ಎಸ್.ಆರ್. ಪಾಟೀಲ್ ನೆನಪಿಸಿ, ಪ್ರತಿಪಕ್ಷ ಸ್ಥಾನಕ್ಕೆ ಕನಿಷ್ಠ ಗೌರವ ನೀಡದ ಫ್ಯಾಸಿಸ್ಟ್ ಮನೋಭಾವ ಎಂದು ಹರಿಹಾಯ್ದರು. ಬೊಮ್ಮಾಯಿ ಪ್ರತ್ಯುತ್ತರವಾಗಿ, ನವಲಗುಂದ-ನರಗುಂದ ಗೋಲಿಬಾರ್ ಘಟನೆ ದಿನಗಳನ್ನು ಮೆಲುಕು ಹಾಕಿದರು. ವಾರಗಟ್ಟಲೇ ಪ್ರತಿಪಕ್ಷಗಳು, ಕ್ಷೇತ್ರದ ಶಾಸಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಜನರಿಗೆ ಬಹಿರ್ದೆಸೆಗೆ ಹೋಗಲೂ ಬಿಟ್ಟಿರಲಿಲ್ಲ ಎಂದು ತಿವಿದರು.
ಭೂ ಒತ್ತುವರಿ ಸಂರಕ್ಷಣಾ ಮೊದಲ ಸಭೆ: ಭೂ ಒತ್ತುವರಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ಮೊದಲ ಸಭೆ ವಿಧಾನಸೌಧದಲ್ಲಿ ನಡೆಯಿತು.
ಶಾಸಕರು ಮತ್ತು ಸಮಿತಿ ಸದಸ್ಯರಾದ ಎಸ್.ಆರ್. ವಿಶ್ವನಾಥ್, ರಾಜುಗೌಡ, ಎ.ಟಿ. ರಾಮಸ್ವಾಮಿ, ರಾಜಶೇಖರ ಪಾಟೀಲ ಹುಮನಾಬಾದ್, ಆರಗ ಜ್ಞಾನೇಂದ್ರ ಭಾಗವಹಿಸಿದ್ದರು.
ಇದು ಮೊದಲ ಸಭೆ ಅಷ್ಟೆ. ಎಲ್ಲೆಲ್ಲಿ ಒತ್ತುವರಿ ಆಗಿದೆ ಎಂಬುದನ್ನು ಪರಿಶೀಲನೆ ಮಾಡಿ, ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಕೆ.ಜಿ. ಬೋಪಯ್ಯ ಹೇಳಿದರು.
ಅವಿಭಜಿತ ಬೆಂಗಳೂರು ಜಿಲ್ಲೆಯಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಬೆಲೆ ಬಾಳುವ 7 ಸಾವಿರ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ಎ.ಟಿ. ರಾಮಸ್ವಾಮಿ ಹೇಳಿದರು.
ಗೋವುಗಳ ಬಣ್ಣಿಸಿದ ಹಾಲಪ್ಪ: ಕಲಾಪದಲ್ಲಿ ಗೋವುಗಳ ಬಗ್ಗೆ ಶಾಸಕ ಹರತಾಳು ಹಾಲಪ್ಪ ಬುಧವಾರ ಅದ್ಭುತವಾಗಿ ಮಾತನಾಡುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಕುವೆಂಪು ಕವನ ಉಲ್ಲೇಖಿಸಿದರು. ಗೋವು ಸಂತತಿ ಉಳಿಸಲು ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು. ಗೋವಿನ ಬಗ್ಗೆ ನಮಗೆ ಒಳ್ಳೆಯ ಭಾವನೆಗಳು ಇವೆ. ಗೋವನ್ನು ಸಾಕಿ, ಸಲುಹಬೇಕು ಅದನ್ನು ಮುದಿಯಾದ ಮೇಲೆ ಮಾರಬಾರದೆಂದು ಕುವೆಂಪು ಹೇಳಿದ್ದಾರೆ ಎಂದರು.