ನರಗುಂದ: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿ ಸ್ವೀಕಾರಕ್ಕೆ ಸರ್ಕಾರ ಸಿದ್ಧವಿದೆ. ಆದರೆ, ವಿಪಕ್ಷಗಳು ಕಾಂತರಾಜು ವರದಿ ಸರಿಯಿಲ್ಲ. ಮನೆಮನೆಗೆ ತೆರಳಿ ಸಮೀಕ್ಷೆಯಾಗಿಲ್ಲ. ಇದು ಅವೈಜ್ಞಾನಿಕವೆಂದು ಸ್ಥಳೀಯ ಶಾಸಕರು ಟೀಕೆ ಮಾಡಿ ವರದಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣವಾಗುವ ಮನಸು ಇಲ್ಲವೆಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಾಮಾಜಿಕ ಬದಲಾವಣೆ ಮತ್ತು ವಾಸ್ತವಿಕತೆಯನ್ನು ವಿರೋಧ ಮಾಡುತ್ತಾರೆ. ಆಯೋಗದ ವರದಿಯನ್ನು ವಿರೋಧ ಮಾಡಿದರು. ಅದು ಆಗಿನ ಸಂದರ್ಭದಲ್ಲಿ ಕೋರ್ಟ್ವರೆಗೆ ಹೋಯಿತು. ಕಾಂತರಾಜು ವರದಿ ಮೀಸಲಾತಿ ಮೂಲಕ ಅವಕಾಶ ಸಿಗದವರಿಗೆ, ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ನಿರ್ಧರಿತ ವರದಿಯಾಗಿದೆ. ಅರಸು ಕಾಲದಲ್ಲಿಯೇ ಸಮಾನತೆಗಾಗಿ ಪ್ರತಿಪಾದನೆ ಮಾಡಲಾಗಿತ್ತು ಎಂದರು.
ಕಾಂತರಾಜು ವರದಿ ಸದ್ಯ ಸಿಎಂ ಬಳಿ ಇದೆ. ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ವರದಿ ಸ್ವೀಕಾರವಾಗಲಿದೆ. ಶಾಸಕ ಸಿ.ಸಿ. ಪಾಟೀಲ ಅವರು ಹಿಂದುಳಿದ ವರ್ಗಗಳ ಸಮಾನತೆಯ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ವರದಿಯನ್ನು ಒಪ್ಪಿಕೊಳ್ಳಬೇಕು. ಹಾವನೂರ ವರದಿಯಲ್ಲಿಯೂ ಎಬಿಸಿಡಿ ಗ್ರುಪ್ ಮಾಡಲಾಯಿತು. ವರದಿಯಲ್ಲಿ ಉತ್ತಮ ಪ್ರತಿಕ್ರಿಯೆಯೂ ಬಂದಿತು ಎಂದರು.
ಸಿ.ಸಿ. ಪಾಟೀಲ ಅವರು ರಾಜಕೀಯ ದುರುದ್ದೇಶದಿಂದ ವಿರೋಧ ಮಾಡುವುದು ಸರಿಯಲ್ಲ. ಇದರಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ವೈಯಕ್ತಿಕ ಟೀಕೆ ಮಾಡುವುದನ್ನು ಸಿ.ಸಿ. ಪಾಟೀಲ ಅವರು ಕೈಬಿಡಬೇಕು. ನಾನು ಸೂಪರ್ ಎಂಎಲ್ಎ ಎಂದು ಸಿ.ಸಿ. ಪಾಟೀಲ ಹೇಳಿದ್ದಾರೆ. ಹೌದು, ನಾನು ಅಭಿವೃದ್ಧಿ ಪರ ಕೆಲಸ ಮಾಡಿ ಈ ಹಿಂದೆ ಸೂಪರ್ ಎಂಎಲ್ಎ ಆಗಿರುವೆ. ಸಿ.ಸಿ. ಪಾಟೀಲರು ಉಪಮುಖ್ಯಮಂತ್ರಿ ಕನಸು ಕಂಡಿದ್ದರು. ಆದರೆ, ಅದು ಕೈಗೂಡಲಿಲ್ಲ. ಸುಮ್ಮನೆ ಇನ್ನೊಬ್ಬರ ಮೇಲೆ ಟೀಕೆ ಮಾಡುವುದು ಸರಿಯಲ್ಲ. ಗೌರವದಿಂದ ನಡೆದುಕೊಳ್ಳುವ ವರ್ತನೆಯನ್ನು ಅವರು ರೂಢಿಸಿಕೊಳ್ಳಬೇಕು. ವೈಯಕ್ತಿಕ ಹೇಳಿಕೆ ಮುಂದುವರಿದರೆ ನಾನೂ ಅವರ ಮೇಲೆ ವೈಯಕ್ತಿಕ ಟೀಕೆಗೆ ಮುಂದಾಗಬೇಕಾಗುತ್ತದೆ ಎಂದರು.
ಗ್ಯಾರಂಟಿ ಉಸ್ತುವಾರಿ ಸಮಿತಿಗೆ ತಾಲೂಕಿನಲ್ಲಿ ವಿವೇಕ ಯಾವಗಲ್ ಅಧ್ಯಕ್ಷರಾಗಿದ್ದಾರೆ. ಅವರು ಕಾಂಗ್ರೆಸ್ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳ ಕುರಿತಾಗಿ ಜನದಟ್ಟು ಮಾಡಿಕೊಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪುತ್ರ ವ್ಯಾಮೋಹ ಎಂದು ಪಾಟೀಲ ನನ್ನನ್ನು ಟೀಕಿಸುತ್ತಾರೆ. ಸಿ.ಸಿ. ಪಾಟೀಲ ಅವರ ಪುತ್ರ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಪ್ರವೀಣ ಯಾವಗಲ್, ಎಂ.ಎಸ್. ಪಾಟೀಲ, ಜಿ.ಐ. ಕುರಹಟ್ಟಿ, ಎಂ.ಬಿ. ಅರಹುಣಸಿ, ರಾಜು ಕಲಾಲ, ಶಿವನಗೌಡ ಹೆಬ್ಬಳ್ಳಿ, ದಿವಾನಸಾಬ ಕಿಲ್ಲೇದಾರ, ಉದಯ ಮುಧೋಳೆ. ಪ್ರಕಾಶ ಹಡಗಲಿ, ವಿಷ್ಣು ಸಾಠೆ, ಅಂಬರೀಷ ಕೋಟಿ, ಎಸ್.ಕೆ. ದಂಡಾಪೂರ, ದತ್ತು ಜೋಗಣ್ಣವರ, ಶಂಕರ ಸೂರೇಬಾನ, ಪ್ರಭು ಭಾವಿಕಟ್ಟಿ, ದೇವರಾಜ ನಾಗನೂರ, ಜಗದೀಶ ಕಗದಾಳ, ರಾಘು ನಲವಡೆ, ರವಿ ಯರಗಟ್ಟಿ, ವೀರೇಶ ಚುಳಕಿ, ಕಿರಣ ಮಾನೆ, ಪಂಚಪ್ಪ ಚಲವಾದಿ, ಪ್ರವೀಣ ಅರಹುಣಸಿ ಉಪಸ್ಥಿತರಿದ್ದರು.