ಜಿಲ್ಲೆ

ರೋಗಿಗಳಿಗೆ ವೈದ್ಯರ ಪ್ರೀತಿ ವಿಶ್ವಾಸದ ಮಾತುಗಳೂ ಬೇಕು: ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ

ಮೈಸೂರು: ತಮ್ಮಲ್ಲಿ ಬರುವ ರೋಗಿಗಳನ್ನು ಕುಟುಂಬದವರಂತೆ ಕಂಡು ಚಿಕಿತ್ಸೆ ನೀಡಿದಾಗ ಆಪ್ತತೆ ಬೆಳೆಯುವ ಜತೆಗೆ ಬೇಗ ಗುಣವಾಗುತ್ತಾರೆ ಎಂದು ಖ್ಯಾತ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಅಭಿಪ್ರಾಯಪಟ್ಟರು.

ಪಡುವಾರಹಳ್ಳಿಯಲ್ಲಿರುವ ನಂಜಮ್ಮ ಜವರೇಗೌಡ (ಎನ್‌ಜೆ) ಆಸ್ಪತ್ರೆಯಲ್ಲಿ ಆರಂಭಿಸಲಾದ ಕಾಸ್ಮೆಟಿಕ್ ಸ್ತ್ರೀರೋಗ ವಿಭಾಗಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ರೋಗಿಗಳು ವೈದ್ಯರನ್ನು ದೇವರಂತೆ ಕಾಣುತ್ತಾರೆ. ಅವರಿಗೆ ಪ್ರೀತಿ, ವಿಶ್ವಾಸ ತುಂಬಿದ ಮಾತುಗಳು ಬೇಕು. ಹಾಗಾಗಿ ವೈದ್ಯರಾದವರು ಅವರನ್ನು ತಮ್ಮ ಕುಟುಂಬದವರಂತೆ ಕಂಡು ಚಿಕಿತ್ಸೆ ನೀಡಿದರೆ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿ ಬೇಗ ಗುಣವಾಗುತ್ತಾರೆ ಎಂದರು.

ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವುದು, ಪ್ರಬಂಧ ಮಂಡನೆ ಮಾಡುವುದರಿಂದ ವೈದ್ಯರ ಹೆಸರು ಉಳಿಯುವುದಿಲ್ಲ. ಸಾಮಾನ್ಯ ಜನರಿಗೂ ಸುಲಭವಾಗಿ ಚಿಕಿತ್ಸೆ ದೊರೆತಾಗ ಚಿಕಿತ್ಸೆ ನೀಡಿದ ವೈದ್ಯರ ಹೆಸರು ಉಳಿಯುತ್ತದೆ ಎಂದು ಹೇಳಿದರು.

ನಮ್ಮ ಹಳೆಯ ಸಂಪ್ರದಾಯ ಚಿಕಿತ್ಸೆ ಜತೆಗೆ ಇಂದಿನ ಆಧುನಿಕ ತಾಂತ್ರಿಕತೆಯನ್ನು ಕರಗತ ಮಾಡಿಕೊಳ್ಳಬೇಕು. ಆಗ ತಮ್ಮ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ದೇವರಿಗೆ ಪೂಜೆ ಮಾಡುವ ಜತೆಗೆ ತಮ್ಮಲ್ಲಿ ಬರುವ ರೋಗಿಗಳು ಗುಣವಾಗಲಿ ಎನ್ನುವ ಸಂಕಲ್ಪ ನಮ್ಮದಾಗಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆ ವೈದ್ಯರಾದ ಡಾ.ದುರ್ಗೇಶ್, ಡಾ.ಸುಜ್ಯೋತಿ ದುರ್ಗೇಶ್, ಡಾ.ಸತೀಶ್ ದುರ್ಗೇಶ್, ಡಾ.ಸುದೀಶ್ ದುಗೇಶ್, ಡಾ.ಸಿಂಧು ಲಕ್ಷ್ಮೀ, ಡಾ.ಮಮತಾ ಚಂದ್ರಪ್ಪ ಇತರರು ಇದ್ದರು.