ಜಿಲ್ಲೆ

ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ, ಆ್ಯಂಬುಲೆನ್ಸ್ ಚಾಲಕರಿಲ್ಲದೆ ಸಾವಿಗೀಡಾದ ರೋಗಿ; ಸಂಬಂಧಿಕರ ಆರೋಪ..

ಚಾಮರಾಜನಗರ: ಸರ್ಕಾರ ಯಶಸ್ವಿನಿ ಯೋಜನೆ ಮರುಸ್ಥಾಪನೆ, ರಾಜ್ಯಾದ್ಯಂತ ಜನತಾ ಕ್ಲಿನಿಕ್ ಆರಂಭ ಮುಂತಾದ ಯೋಜನೆಗಳನ್ನು ಘೋಷಿಸಿದ್ದಾಗ, ಹೊಸ ಯೋಜನೆಗಳನ್ನು ಆರಂಭಿಸುವ ಜತೆಗೆ ಇರುವ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಆಗುವಂತೆ, ಸರಿಯಾದ ಸೌಲಭ್ಯ ಇರುವಂತೆ ನೋಡಿಕೊಳ್ಳುವುದೂ ಅತಿಮುಖ್ಯ ಎಂಬುದಾಗಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ಅಭಿಪ್ರಾಯಕ್ಕೆ ಪೂರಕ ಎನ್ನುವಂತೆ ಇದೀಗ ಘಟನೆಯೊಂದು ನಡೆದಿದೆ.

ಚಾಮರಾಜನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿನ ಅವ್ಯವಸ್ಥೆಯಿಂದಾಗಿ ರೋಗಿಯೊಬ್ಬರು ಸಾವಿಗೀಡಾಗಿದ್ದಾರೆ. ತೆರಕಣಾಂಬಿ ಗ್ರಾಮದ ಮಹೇಶ್ (33) ಎಂಬವರು ಸಾವಿಗೀಡಾದ ವ್ಯಕ್ತಿ. ಎದೆನೋವಿನಿಂದ ಬಳಲುತ್ತಿದ್ದ ಇವರು ತೆರೆಕಣಾಂಬಿ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಆದರೆ ಅಲ್ಲಿನ ಅವ್ಯವಸ್ಥೆಯಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದರು.

ಮಹೇಶ್ ಆಸ್ಪತ್ರೆಗೆ ತೆರಳಿದ್ದಾಗ ಅಲ್ಲಿ ವೈದ್ಯರು ಇರಲಿಲ್ಲ. ಆ್ಯಂಬುಲೆನ್ಸ್ ಇದ್ದರೂ ಚಾಲಕ ಇರಲಿಲ್ಲ. ಹೀಗಾಗಿ ಮಹೇಶ್​ಗೆ ಅಗತ್ಯ ಚಿಕಿತ್ಸೆ ತಕ್ಷಣ ಸಿಗದೆ ಸಾವಿಗೀಡಾಗಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಎಚ್​ಒ ಡಾ.ವಿಶ್ವೇಶ್ವರಯ್ಯ ಅವರು ತೆರಕಣಾಂಬಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರೊಂದಿಗೆ ಸಭೆ ನಡೆಸಿದ ಅವರು, ಆಸ್ಪತ್ರೆ ಸಿಬ್ಬಂದಿ, ವೈದ್ಯರು ಹಾಗೂ ಆ್ಯಂಬುಲೆನ್ಸ್ ಚಾಲಕರಿಗೆ ಸ್ಥಳದಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.