ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ರಸ್ತೆಗುಂಡಿಗಳು ಒಕ್ಕರಿಸಲಾರಂಭಿಸಿವೆ. ಇದರಿಂದಾಗಿ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 13,800 ಕಿ.ಮೀ. ಉದ್ದದ ರಸ್ತೆಗಳಿವೆ. ಕೆಲ ರಸ್ತೆಗಳಿಗೆ ಮಾತ್ರ ಡಾಂಬರ್ ಹಾಕಲಾಗಿದ್ದು, ಬಹುತೇಕ ರಸ್ತೆಗಳು ಹಾಳಾಗಿವೆ. ಪ್ರತಿ ರಸ್ತೆಯಲ್ಲಿ ಗುಂಡಿದರ್ಶನ ಸಾಮಾನ್ಯ ಎಂಬಂತಾಗಿದೆ. ಅಡ್ಡರಸ್ತೆಗಳು, ಗಲ್ಲಿಗಳಲ್ಲಿನ ಇಕ್ಕಟ್ಟಾದ ಹಾದಿಗಳ ಸ್ಥಿತಿ ಹದಗೆಟ್ಟಿದ್ದು, ಈಗಾಗಲೇ ಮುಚ್ಚಿರುವ ಗುಂಡಿಗಳು ಹಾಗೂ ರಸ್ತೆಗಳಿಗೆ ಹಾಕಿರುವ ಡಾಂಬರ್ ಕಿತ್ತುಬರುತ್ತಿವೆ. ಸಾರ್ವಜನಿಕರು ರಸ್ತೆ ಗುಂಡಿಗಳ ಭಾವಚಿತ್ರ ತೆಗೆದು ‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ ಪಾಲಿಕೆ ಗಮನಕ್ಕೆ ತರುತ್ತಿದ್ದಾರೆ. ಆದರೆ, ಇವನ್ನು ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ತೋರುತ್ತಿದೆ. ರಸ್ತೆಗುಂಡಿ ದೆಸೆಯಿಂದಾಗಿ ‘ಬೆಂಗಳೂರು ಬ್ರ್ಯಾಂಡ್‌ಗೆ’ ಕಳೆದ ವರ್ಷ ಧಕ್ಕೆ ಉಂಟಾಗಿತ್ತು. ಈ ಬಾರಿಯೂ ಸಹ ಅದೇ ಪರಿಸ್ಥಿತಿ ಉಂಟಾಗುವ ಸೂಚನೆಗಳು ಕಾಣಿಸುತ್ತಿವೆ. ರಾಜಧಾನಿಯ ರಸ್ತೆ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂ. ವ್ಯಯಿಸಲಾಗುತ್ತಿದೆ. ಪ್ರತಿ ಕಿ.ಮೀ. ರಸ್ತೆ ಅಭಿವೃದ್ಧಿಗೆ ಸರಾಸರಿ 98 ಲಕ್ಷ ರೂ. ಸುರಿಯಲಾಗುತ್ತಿದೆ. ಆದರೆ, ಕಳಪೆ ಕಾಮಗಾರಿಯಿಂದಾಗಿ ಕೆಲ ದಿನಗಳಲ್ಲೇ ಈ ರಸ್ತೆಗಳು ವಿರೂಪಗೊಳ್ಳುತ್ತಿವೆ. ಗುಂಡಿ ಮುಚ್ಚಲೂ ಹಾಕುವ ತೇಪೆಯೂ ಕಿತ್ತುಹೋಗುತ್ತಿದೆ. ಜನರು ಧೂಳಿನ ಸ್ನಾನ ಮಾಡುವಂತಾಗಿದೆ!
ನಗರದಲ್ಲಿ ಶೇ.40 ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಗುತ್ತಿಗೆದಾರರೇ 3-5 ವರ್ಷಗಳ ಕಾಲ ರಸ್ತೆ ನಿರ್ವಹಣೆ ಮಾಡಬೇಕೆಂಬ ನಿಯಮವಿದೆ. ಆದರೆ, ಗುತ್ತಿಗೆದಾರರು ಈ ನಿಯಮ ಪಾಲಿಸುತ್ತಿಲ್ಲ. ಪದೇಪದೆ ಡಾಂಬರೀಕರಣ ಮಾಡಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ವಾರ್ಡ್ ವಿಸ್ತೀರ್ಣ ಆಧಾರದ ಮೇರೆಗೆ ರಸ್ತೆಗಳ ಅಭಿವೃದ್ಧಿಗೆ ಹತ್ತಾರು ಕೋಟಿ ರೂ. ಅನುದಾನ ನೀಡಲಾಗುತ್ತದೆ. ಒಮ್ಮೆ ಡಾಂಬರ್ ಹಾಕಿದರೆ ಕನಿಷ್ಠ 5-6 ವರ್ಷ ಕಾಲ ಬಾಳಿಕೆ ಬರಬೇಕು. ಆದರೆ ಹಾಗಾಗುತ್ತಿಲ್ಲ.
ಇದನ್ನೂ ಓದಿ:ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟ ಎಚ್.ಡಿ. ರೇವಣ್ಣ|HD Revanna Hits Back At Congress Leaders
3,547 ಕೋಟಿ ರೂ. ವ್ಯಯ: 2020-21 ಮತ್ತು 2021-22ರಲ್ಲಿ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು.ಈ ಹಿನ್ನೆಲೆಯಲ್ಲಿ ಬಿಬಿಎಂಪಿ ರಸ್ತೆಗಳಿಗೆ ಡಾಂಬರೀಕರಣ ಹಾಕಿ ಮುರ‌್ನಾಲ್ಕು ವರ್ಷಗಳೇ ಆಗಿತ್ತು. 2020-21 ಮತ್ತು 2021-22ರ ಬಿಬಿಎಂಪಿ ಬಜೆಟ್‌ಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ. ಆದರೂ, ರಸ್ತೆ ಕಾಮಗಾರಿಗಳಿಗೆ 3 ವರ್ಷದಲ್ಲಿ 3,547 ಕೋಟಿ ರೂ. ವ್ಯಯಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. ಆದರೆ, ಇಷ್ಟೊಂದು ಹಣ ವ್ಯಯಿಸಿದ್ದರೂ ನಗರದ ರಸ್ತೆಗಳು ಸುಧಾರಿಸಿಲ್ಲ. ಹಾಗಾಗಿ, ರಸ್ತೆ ಕಾಮಗಾರಿ ನಡೆಸದೆ ನಕಲಿ ಬಿಲ್ ತಯಾರಿಸಿ ಕೋಟ್ಯಂತರ ರೂ. ಹಣ ಲಪಾಟಯಿಸಿರುವ ಅನುಮಾನವೂ ಇದೆ. ಪ್ರಸಕ್ತ ಸಾಲಿನಲ್ಲಿ ರಸ್ತೆ ಕಾಮಗಾರಿಯೂ ನಡೆಯುತ್ತಿಲ್ಲ. ಪದೇಪದೆ ಮಳೆ ನೆಪ ಹೇಳುತ್ತಿದ್ದ ಬಿಬಿಎಂಪಿ, ಈ ಬಾರಿ ಮಳೆ ಕೊರತೆ ದ್ದರೂ ರಸ್ತೆಗುಂಡಿ ಮುಚ್ಚುವ ಗೋಜಿಗೆ ಹೋಗುತ್ತಿಲ್ಲ.
ಅವೈಜ್ಞಾನಿಕ ರಸ್ತೆ ಕಾಮಗಾರಿ: ನಗರದ ರಸ್ತೆಗಳನ್ನು ಯಾವ ರೀತಿಯಲ್ಲಿ ನಿಮಾಣ ಮಾಡಬೇಕು ಎಂಬುದನ್ನು ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ನಿಯಮ ರೂಪಿಸಿದೆ. ಇದರನ್ವಯ ಡಾಂಬರ್ ರಸ್ತೆಗಳಿಗೆ ಐಆರ್‌ಸಿ-37, ವೈಟ್ ಟಾಪಿಂಗ್‌ಗೆ ಐಆರ್‌ಸಿಎಸ್‌ಪಿ-76 ಮತ್ತು ರಸ್ತೆಗಳ ನಿರ್ವಹಣೆಗೆ ಐಆರ್‌ಸಿ-82 ನಿಯಮ ಪಾಲಿಸಬೇಕು. ಆದರೆ, ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.
7,468 ಅಪಘಾತ: ಉದ್ಯಾನನಗರಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದಕ್ಕೆ ಕಳಪೆ ರಸ್ತೆಗಳೂ ಕಾರಣ ಎಂಬುದನ್ನು ತಳ್ಳಿಹಾಕುವಂತಿಲ್ಲ. 2021ರಲ್ಲಿ 3,213; 2022ರಲ್ಲಿ 3,822 ಹಾಗೂ 2023ರ ಜ.31ರವರೆಗೆ 433 ಸೇರಿ ಒಟ್ಟು 7,468 ಅಪಘಾತವಾಗಿದೆ. ಈ ಸ್ಥಿತಿಯನ್ನು ‘ಬ್ರ್ಯಾಂಡ್ ಬೆಂಗಳೂರು’ ಕನಸು ಹೊತ್ತ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಗಮನಿಸಿಲ್ಲವೇನೋ!