ಹಾಸನ: ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಪಟೇಲ್ ಶಿವಪ್ಪ ಅವರನ್ನು ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ.
ಹುಡಾ ಅಧ್ಯಕ್ಷ ಅಧ್ಯಕ್ಷಗಾದಿಗಾಗಿ ಸ್ಥಳೀಯರು-ಹೊರಗಿನವರು ಎಂಬ ವಿಚಾರ ಮುಂದಿಟ್ಟುಕೊಂಡು ನಡೆಸಿದ ಗುದ್ದಾಟ, ಪ್ರತಿಭಟನೆ ಯಾವುದೂ ಫಲ ನೀಡಿಲ್ಲ. ಯಾರ ಒತ್ತಡ, ವಿರೋಧ, ಪ್ರತಿಭಟನೆಗೂ ಬಗ್ಗದ ಸಿದ್ದರಾಮಯ್ಯ ಅವರು ತಮ್ಮದೇ ಸಮುದಾಯದ ಅರಸೀಕೆರೆ ಕ್ಷೇತ್ರ ವ್ಯಾಪ್ತಿಯ ಗೊಲ್ಲರಹಳ್ಳಿ ಪಟೇಲ್ ಶಿವಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸ್ಥಳೀಯರಿಗೆ ನಿರಾಸೆ ಮೂಡಿಸಿದ್ದಾರೆ.
ಅಧ್ಯಕ್ಷರ ಆಯ್ಕೆ ಪಟ್ಟಿ ಜುಲೈ ತಿಂಗಳಲ್ಲೇ ಸಿದ್ಧವಾಗಿತ್ತು. ಪಟೇಲ್ ಶಿವಪ್ಪ ಹೆಸರು ಬಹಿರಂಗಗೊಳ್ಳುತ್ತಿದ್ದಂತೆ, ಹಾಸನ ವಿಧಾನಸಭಾ ಕ್ಷೇತ್ರದ ಮುಖಂಡರಿಗೆ ಹುಡಾ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಕೂಗು ಜೋರಾಗಿತ್ತು. ಹೀಗಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ಸಾಲು ಸಾಲು ಸುದ್ದಿಗೋಷ್ಠಿ, ಪ್ರತಿಭಟನೆ ಹಾಗೂ ಪಕ್ಷದ ಮುಖಂಡರ ಮೂಲಕ ಒತ್ತಡ ಹಾಕುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಡಬ್ಲುೃಸಿ ಸಭೆಗೆಂದು ಬಿಹಾರ್‌ಗೆ ತೆರಳಿದ ಸಂದರ್ಭದಲ್ಲೇ ನಿಗಮ, ಮಂಡಳಿಗಳಿಗೆ ನೇಮಕ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಿಸಿದ್ದಾರೆ. 39 ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಹೈಕಮಾಂಡ್ ಮುದ್ರೆ ಹಾಕಿ ರಾಜ್ಯಕ್ಕೆ ರವಾನೆ ಮಾಡಿದೆ. ಈ ಪಟ್ಟಿಯಲ್ಲಿ ಹುಡಾ ಅಧ್ಯಕ್ಷರಾಗಿ ಶಿವಪ್ಪ ಅವರು ಸ್ಥಾನ ಪಡೆದಿದ್ದಾರೆ.
ಕೇಳಿಬಂದಿತ್ತು ಹಲವರ ಹೆಸರು: ಹುಡಾ ಅಧ್ಯಕ್ಷ ಸ್ಥಾನಕ್ಕೆ ಸ್ಥಳೀಯವಾಗಿ ಎಚ್.ಕೆ.ಮಹೇಶ್, ದೇವರಾಜೇಗೌಡ, ಬನವಾಸೆ ರಂಗಸ್ವಾಮಿ ಸೇರಿ ವಿವಿಧ ಮುಖಂಡರ ಹೆಸರು ಕೇಳಿ ಬರುತ್ತಿತ್ತು. ಇನ್ನು ಹೊರಗಿನವರಲ್ಲಿ ಅರಕಲಗೂಡು ಪ್ರಸನ್ನ, ಚನ್ನರಾಯಪಟ್ಟಣ ಶಂಕರ್ ಚರ್ಚೆಯಲ್ಲಿತ್ತು. ಈ ಹೆಸರುಗಳ ನಡುವೆ ಕುರುಬ ಸಮುದಾಯದ ಮುಖಂಡ ಪಟೇಲ್ ಶಿವಪ್ಪ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು.
ಪಟ್ಟುಬಿಡದ ಸಿಎಂ: ಹುಡಾ ಅಧ್ಯಕ್ಷ ಸ್ಥಾನ ವಿಚಾರವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ನಡುವೆ ಜಟಾಪಟಿ ಕೂಡ ನಡೆದಿತ್ತು. ಹುಡಾ ಅಧ್ಯಕ್ಷ ಸ್ಥಾನದ ವಿಷಯ ನನಗೆ ಬಿಡಿ, ಆ ಬಗ್ಗೆ ಚರ್ಚೆ ಅನಗತ್ಯ ಎಂದು ಪಟೇಲ್ ಶಿವಪ್ಪ ಪರ ಸಿಎಂ ನಿಂತಿದ್ದರು. ಈ ವಿಚಾರ ರಾಜಣ್ಣ ಅವರ ಕೋಪಕ್ಕೂ ಕಾರಣವಾಗಿ, ನಿಮ್ಮದೇ ನಿರ್ಧಾರ ಎಂದ ಮೇಲೆ ನಾನೇಕೆ ಉಸ್ತುವಾರಿ ಸಚಿವನಾಗಿ ಇರಬೇಕು ಎಂದು ಆಕ್ರೋಶ ಹೊರಹಾಕಿದ್ದರು.
2 ಸ್ಥಾನವೂ ಅರಸೀಕೆರೆಗೆ
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೀಗಾಗಿ ಆ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗೃಹಮಂಡಳಿ ಅಧ್ಯಕ್ಷ ಸ್ಥಾನವನ್ನು ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ನೀಡಲಾಗಿದೆ. ಇದೀಗ ಹುಡಾ ಅಧ್ಯಕ್ಷ ಸ್ಥಾನವನ್ನೂ ಅರಸೀಕೆರೆ ಕ್ಷೇತ್ರದವರಿಗೆ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೊರಗಿನವರಿಗೆ ಹುಡಾ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಈ ಬಾರಿಯೂ ಹಾಗೆ ಮಾಡಲಾಗಿದೆ. ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಹಾಸನ ಕ್ಷೇತ್ರಕ್ಕೆ ಸೀಮಿತವಾಗಿದೆ. ಅದರಲ್ಲೂ 3 ರಿಂದ 4 ಕಿ.ಮೀ. ವ್ಯಾಪ್ತಿಯಲ್ಲಿರುವವರಿಗೆ ನೀಡಬೇಕು ಎಂಬ ಯಾವ ನಿಯಮವನ್ನು ಪಾಲಿಸಿಲ್ಲ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.