ಜಿಲ್ಲೆ

ನಗರದ ರಸ್ತೆಗಳಿಗೆ ತೇಪೆ ಭಾಗ್ಯ

ಸುನಿಲ್ ಪೊನ್ನೇಟಿ

ಮಡಿಕೇರಿ:

ಯಾರು ಎಷ್ಟು ಬೊಬ್ಬೆ ಹೊಡೆದರೂ ತಲೆಯೇ ಕೆಡಿಸಿಕೊಳ್ಳದಿದ್ದ ಮಡಿಕೇರಿ ನಗರಸಭೆ ದಿಢೀರ್ ಎದ್ದು ಕುಳಿತಿದೆ. ಗುಂಡಿಬಿದ್ದ ನಗರದ ರಸ್ತೆಗಳಿಗೆ ಡಾಂಬರಿನ ತೇಪೆ ಹಾಕಲಾಗುತ್ತಿದೆ. ಬುಧವಾರ ಬೆಳಗ್ಗೆಯಿಂದಲೇ ಅಲ್ಲಲ್ಲಿ ಭರದ ಕಾಮಗಾರಿ ಕಂಡುಬರುತ್ತಿದ್ದು, ’ವರ್ಷಕ್ಕೆ ಒಮ್ಮೆಯಾದರೂ ಸಿಎಂ ಕೊಡಗಿಗೆ ಬರಲಪ್ಪ’ ಎಂದು ಸ್ಥಳೀಯರು ಪ್ರಾರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ಅವರು ಸಂಚರಿಸುವ ರಸ್ತೆಗಳು ಸುಸ್ಥಿತಿಗೆ ಮರಳುತ್ತಿದೆ.

ಮೂರು ವರ್ಷಗಳ ಹಿಂದೆ ೨೦೨೧ರ ಫೆಬ್ರವರಿಯಲ್ಲಿ ಜ. ತಿಮ್ಮಯ್ಯ ಸ್ಮಾರಕ ಮ್ಯೂಸಿಯಂ ಉದ್ಘಾಟನೆಗೆ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಮಡಿಕೇರಿಗೆ ಬರುವುದು ಖಚಿತವಾಗುತ್ತಿದ್ದಂತೆಯೇ ಈಗಿನ ರೀತಿಯಲ್ಲಿ ತರಾತುರಿಯಿಂದ ಕಾಮಗಾರಿಗಳನ್ನು ನಡೆಸಲಾಗಿತ್ತು. ಕಾವೇರಿ ನದಿ ಉಗಮಸ್ಥಾನ ತಲಕಾವೇರಿಗೂ ಅಂದು ರಾಷ್ಟ್ರಪತಿ ಭೇಟಿ ನೀಡಿದ್ದರು. ಹಾಗಾಗಿ ರಾಷ್ಟ್ರಪತಿ ಮತ್ತು ಅವರ ಬೆಂಗಾವಲು ಪಡೆ ಸಂಚರಿಸಲಿರುವ ಮಡಿಕೇರಿಯ ರಸ್ತೆಗಳು, ಭಾಗಮಂಡಲ ಬಳಿಯ ಹೆಲಿಪ್ಯಾಡ್‌ನಿಂದ ತಲಕಾವೇರಿಗೆ ತೆರಳುವ ರಸ್ತೆ ದುರಸ್ತಿ ಭಾಗ್ಯ ಕಂಡಿತ್ತು.

ಫೀಲ್ಡ್ ಮಾರ್ಷಲ್ ಕಾಲೇಜು, ಇಂದಿರಾ ಕ್ಯಾಂಟೀನ್, ಗಾಲ್ಫ್‌ಕೋರ್ಸ್, ಸುದರ್ಶನ ಅತಿಥಿಗಹ ಭಾಗದ ರಸ್ತೆಗಳ ಮರು ಡಾಂಬರೀಕರಣವನ್ನೇ ನಡೆಸಲಾಗಿತ್ತು. ಇದಕ್ಕಾಗಿ ಸುಮಾರು ೩೪ ಲಕ್ಷ ರೂ. ಖರ್ಚು ಮಾಡಲಾಗಿತ್ತು. ಮಡಿಕೇರಿಯ ಗುಂಡಿ ಬಿದ್ದಿದ್ದ ರಸ್ತೆಗಳಿಗೆ ಸುಂದರ ರೂಪ ಸಿಕ್ಕಿದಲ್ಲದೆ ಚರಂಡಿಗಳನ್ನು ಸ್ವಚ್ಛ ಮಾಡಲಾಗಿತ್ತು. ವಿದ್ಯುತ್ ಲೈನ್‌ಗಳನ್ನು ದುರಸ್ತಿ ಪಡಿಸಲಾಗಿತ್ತು. ಭಾಗಮಂಡಲ-ತಲಕಾವೇರಿ ಮಾರ್ಗದಲ್ಲಿ ಸಂಚಾರಕ್ಕೆ ಇದ್ದ ಅಡಚಣೆಗಳು ನಿವಾರಿಸಲಾಗಿತ್ತು. ಇದೀಗ ಅಷ್ಟರ ಮಟ್ಟಿಗೆ ಸಮರೋಪಾದಿಯ ಸಿದ್ಧತೆ ಕಂಡುಬರುತ್ತಿಲ್ಲವಾದರೂ ನೆಮ್ಮದಿಯ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸ ಆಗುತ್ತಿದೆ.

ಮಳೆಗಾಲದ ಅವಧಿಯಲ್ಲಿ ಜಡಿ ಮಳೆಗೆ ಹಾಳಾಗುವ ರಸ್ತೆಯನ್ನು ಮಳೆಗಾಲ ಮುಗಿಯುತ್ತಿದ್ದಂತೆಯೇ ಸರಿಪಡಿಸುವುದು ಮಡಿಕೇರಿಯಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಆದರೆ ಈ ಬಾರಿ ರಸ್ತೆ ದುರಸ್ತಿ ಕೆಲಸಗಳು ನಡೆದಿರಲಿಲ್ಲ. ಸ್ಥಳೀಯ ಸಂಘಟನೆಗಳು, ಪ್ರಮುಖರು ನಗರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಸಂಘಟನೆಯೊಂದು ನಗರಸಭೆ ಮುಂದೆ ಪ್ರತಿಭಟನೆ ಎಚ್ಚರಿಕೆ ನೀಡಿದಾಗ ಪ್ರತಿಭಟನೆಯ ಮುಜುಗರ ತಪ್ಪಿಸಿಕೊಳ್ಳಲು ಗುಂಡಿಬಿದ್ದ ರಸ್ತೆಗಳಿಗೆ ಅಲ್ಲಲ್ಲಿ ತೇಪೆ ಹಚ್ಚುವ ಕೆಲಸ ಮಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿತ್ತು.

ಆದರೆ ಗುಣಮಟ್ಟದ ಕಾಮಗಾರಿ ನಡೆಯದ ಕಾರಣಕ್ಕೆ ಆಗಾಗ್ಗೆ ಸುರಿಯುತ್ತಿದ್ದ ಮಳೆಯಿಂದ ಮತ್ತೆ ರಸ್ತೆಗಳು ಹಾಳಾಗಿದ್ದವು. ದಸರಾ ವೇಳೆಗೆ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಗಬಹುದು ಎನ್ನುವ ಸ್ಥಳೀಯರ ನಿರೀಕ್ಷೆ ಮತ್ತೆ ಹುಸಿ ಆಗಿತ್ತು. ದಶಮಂಟಪ ಮತ್ತು ಕರಗಗಳು ಸಂಚರಿಸುವ ರಸ್ತೆಗಳಲ್ಲಷ್ಟೇ ಗುಂಡಿ ಮುಚ್ಚುವ ಕೆಲಸಗಳು ನಡೆದಿತ್ತು. ಆದರೆ ಮತ್ತೆ ಮತ್ತೆ ಮಳೆಯಾಗುತ್ತಿದ್ದ ಕಾರಣ ಅಲ್ಲಿಯೂ ಕೂಡ ದಸರಾ ಮುಗಿಯುತ್ತಿದ್ದಂತೆಯೇ ರಸ್ತೆಗಳು ಮೊದಲಿನ ಸ್ಥಿತಿಗೆ ಬಂದಿದ್ದವು.

ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುತ್ತಾರೆ. ಅದರಲ್ಲೂ ವಾರಾಂತ್ಯ ಮತ್ತು ಇತರ ರಜಾದಿನಗಳಲ್ಲಿ ಮಡಿಕೇರಿ ಗಿಜಿಗುಡುತ್ತಿರುತ್ತದೆ. ಹಾಗಾಗಿ ಹಾಳಾದ ರಸ್ತೆಗಳನ್ನು ಸರಿಪಡಿಸಿ ಎನ್ನುವ ಸಾರ್ವಜನಿಕರ ಮನವಿಗಳಿಗೆ ನಗರಾಡಳಿತ ಕಿವಿಗೊಡುತ್ತಲೇ ಇರಲಿಲ್ಲ. ಇದೀಗ ಮುಖ್ಯಮಂತ್ರಿ ಬರುತ್ತಿದ್ದಾರೆ ಎನ್ನುವುದು ಗೊತ್ತಾಗಿ, ಅಧಿಕೃತ ಪ್ರವಾಸ ಕಾರ್ಯಕ್ರಮ ಪಟ್ಟಿ ಮಂಗಳವಾರ ಸಂಜೆ ತಲುಪಿದ ನಂತರ ನಿದ್ರೆಯಿಂದ ಎದ್ದಂತೆ ಬುಧವಾರ ಬೆಳಗ್ಗೆಯಿಂದಲೇ ನಗರಸಭೆ ಚುರುಕಿನ ಕಾಮಗಾರಿ ನಡೆಸುತ್ತಿದೆ.

ವಿರಾಜಪೇಟೆಯಲ್ಲಿ ಪಕ್ಷದ ಕಾರ್ಯಕ್ರಮ ಮುಗಿಸಿಕೊಂಡು ಮಡಿಕೇರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಬಸ್ ನಿಲ್ದಾಣ ಬಳಿ ನೂತನವಾಗಿ ನಿರ್ಮಾಣ ಆಗಿರುವ ಎಸ್‌ಪಿ ಕಚೇರಿ ಉದ್ಘಾಟಿಸಲಿದ್ದಾರೆ. ಕುಶಾಲನಗರ ಕೆಎಸ್‌ಆರ್‌ಟಿಸಿ ಡಿಪೋ, ಇಂದಿರಾ ಕ್ಯಾಂಟೀನ್ ಕಟ್ಟಡ ಹೀಗೆ ಹಲವು ಕಾಮಗಾರಿಗಳಿಗೆ ಎಸ್‌ಪಿ ಕಚೇರಿ ಬಳಿಯೇ ನಡೆಯುವ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಡಿಸಿಸಿ ಬ್ಯಾಂಕ್, ರಾಜಾಸೀಟ್ ಮಾರ್ಗವಾಗಿ ನೂತನ ಎಸ್‌ಪಿ ಕಚೇರಿಗೆ ತೆರಳುವುದರಿಂದ ಈ ರಸ್ತೆಯನ್ನು ದುರಸ್ತಿ ಮಾಡಲಾಗುತ್ತಿದೆ.