ಜಿಲ್ಲೆ

ಹದಗೆಟ್ಟ ಶಿರಸಿ-ಹುಬ್ಬಳ್ಳಿ ಹೆದ್ದಾರಿಗೆ ತೇಪೆ ಕಾರ್ಯ

ಬಸವರಾಜ ವೀರಪ್ಪ ಗರಗ

ಮುಂಡಗೋಡ: ಅತಿಯಾದ ಮಳೆಗೆ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ನಿರ್ವಣಗೊಂಡಿದ್ದ ತಗ್ಗು-ಗುಂಡಿಗಳನ್ನು ಹಾಗೂ ರಸ್ತೆಗೆ ತೇಪೆ ಹಚ್ಚುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ನಡೆಸುತ್ತಿದೆ.

ಜೂನ್​ನಿಂದ ಅಕ್ಟೋಬರ್​ವರೆಗೆ ಸುರಿದ ನಿರಂತರ ಮಳೆಯಿಂದಾಗಿ ಪಟ್ಟಣದಿಂದ ತಡಸ ಹಾಗೂ ಶಿರಸಿಗೆ ತೆರಳುವ ರಸ್ತೆ ಸಂಚರಿಸಲು ಆಗದಷ್ಟು ಹದಗೆಟ್ಟಿತ್ತು. ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ನಿರ್ವಣವಾಗಿದ್ದವು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಹಾಗೂ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಹುಬ್ಬಳ್ಳಿ-ಶಿರಸಿ ರಾಜ್ಯ ಹೆದ್ದಾರಿಯಲ್ಲಿನ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದೆ. ಮುಂಡಗೋಡದಿಂದ ಶಿರಸಿಗೆ ತೆರಳಲು ಒಂದು ಗಂಟೆ ಸಮಯ ಸಾಕು ಆದರೆ, ರಸ್ತೆ ಬಹುತೇಕ ಕಡೆಗಳಲ್ಲಿ ಹದಗೆಟ್ಟಿದ್ದರಿಂದ ಎರಡು ಗಂಟೆ ಸಮಯ ಬೇಕಾಗುತ್ತಿತ್ತು. ಅಲ್ಲದೆ, ನಾಲ್ಕು ತಿಂಗಳ ಕಾಲ ವಾಹನ ಚಾಲಕರು ಸಾಕಷ್ಟು ತೊಂದರೆ ಅನುಭವಿಸಿದ್ದು , ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿತ್ತು

ಇದೀಗ ರಸ್ತೆಗೆ ದುರಸ್ತಿ ಕಾರ್ಯ ನಡೆದಿದ್ದು, ಕಾಮಗಾರಿಯನ್ನು ವೇಗವಾಗಿ ಮಾಡಬೇಕು. ಅದರಂತೆ ಯಲ್ಲಾಪುರ, ಬಂಕಾಪುರ ಹಾಗೂ ಗ್ರಾಮೀಣ ಭಾಗದ ರಸ್ತೆಗಳಿಗೂ ತೇಪೆ ಹಚ್ಚುವ ಕೆಲಸ ಮಾಡುವುದು ಅವಶ್ಯವಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.