ಜಿಲ್ಲೆ

ಸೂರ್ಯನ ಆರಾಧನೆಯಿಂದ ಉತ್ತಮ ಆರೋಗ್ಯ

ಚನ್ನಗಿರಿ: ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿ, ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆ ಸೂರ್ಯನೇ ಆಗಿರುವ ಕಾರಣ ಸೂರ್ಯ ಆರಾಧನೆಯ ರಥಸಪ್ತಮಿ ದಿನವೆಂದು ಆಚರಿಸಲಾಗುತ್ತದೆ ಎಂದು ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ. ಸತೀಶ್ ಹೇಳಿದರು.

ಪತಂಜಲಿ ಯೋಗ ಸಂಸ್ಥೆಯಿಂದ ಪಟ್ಟಣದ ರಾಮಮನೋಹರ ಲೋಹಿಯಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಥಸಪ್ತಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಥಸಪ್ತಮಿ ಆಚರಿಸಿ ಪೂಜೆ ಸಲ್ಲಿಸುವುದರಿಂದ ಪ್ರಗತಿ ಹೊಂದುತ್ತಾರೆ. ಎಲ್ಲ ತೊಂದರೆ ಪರಿಹಾರವಾಗುತ್ತವೆ. ಅದೃಷ್ಟ ಕೂಡಿಬರಲಿದ್ದು ವಿಶೇಷ ಫಲಗಳು ಪ್ರಾಪ್ತವಾಗುತ್ತವೆ. ದಾನ, ಧರ್ಮ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ ಎಂದು ತಿಳಿಸಿದರು.

ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯವನ್ನು ಕೊಂಡಾಡುವ ಉದ್ದೇಶದಿಂದ ಬಳಸಲಾಗಿದೆ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಕುರಿತು ಹೇಳಿದ ಕಥೆಯಿದೆ. ನಿಯಮಬದ್ಧವಾಗಿ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತುಬದ್ಧ ಕರ್ತವ್ಯ ಪ್ರಜ್ಞೆ, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆ ರಥಸಪ್ತಮಿಯ ಆಚರಣೆಯಾಗಿದೆ ಎಂದರು.

ಯೋಗ ಶಿಕ್ಷಕ ವಸಂತ್ ಮಾತನಾಡಿ, ಹಿಂದು ಧರ್ಮದಲ್ಲಿ ರಥ ಸಪ್ತಮಿಗೆ ವಿಶೇಷ ಸ್ಥಾನವಿದೆ. ಮಾಘ ಸಪ್ತಮಿಯಿಂದ 6 ತಿಂಗಳ ಕಾಲವನ್ನು ಉತ್ತರಾಯಣ ಪುಣ್ಯಕಾಲವೆಂದು ಪರಿಗಣಿಸಲಾಗುತ್ತದೆ, ಸೂರ್ಯನ 7 ಕುದುರೆಗಳು 7 ವಾರಗಳನ್ನು ಗುರುತಿಸುತ್ತದೆ. ಮೇಷದಿಂದ ಮೀನದವರೆಗೆ 12 ರಾಶಿಗಳಲ್ಲಿ ಪ್ರಯಾಣಿಸುತ್ತಾನೆ. ಇದನ್ನು ಪೂರೈಸಲು 1 ವರ್ಷ ಬೇಕಾಗುತ್ತದೆ. ಬ್ರಾಹ್ಮಿ ಮಹೂರ್ತದಲ್ಲಿ ಸಲ್ಲಿಸುವ ಪೂಜಾ ಕಾರ್ಯದಿಂದ ಹಣಕಾಸು, ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತವೆ ಎಂದರು.

ಸಂಸ್ಥೆಯ ವತಿಯಿಂದ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ರಥಸಪ್ತಮಿ ಆಚರಿಸಲಾಯಿತು, ಯೋಗಸಂಸ್ಥೆಯ ಗುರುಗಳಾದ ಈಶ್ವರನಾಯ್ಕ, ಸುಜಾತ, ಎಂ.ಪಿ.ಸುನೀಲ್, ವಿಶ್ವನಾಥ್, ರಾಜಪ್ಪ, ಸುಧಾ, ರೇಖಾ, ಆಶಾ ಲಕ್ಷ್ಮಿ ಇದ್ದರು.