* ಕೈಲಾಂಚ ಸರ್ಕಲ್ನಲ್ಲಿ ನಿರ್ಮಾಣಕ್ಕೆ ಬೇಡಿಕೆ
* ಬಿಸಿಲು, ಮಳೆಯಿಂದ ಸಮಸ್ಯೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ತಾಲೂಕಿನ ಕೈಲಾಂಚ ಗ್ರಾಮದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ತಂಗುದಾಣ ನಿರ್ಮಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಕೈಲಾಂಚ ಹೋಬಳಿ ಕೇಂದ್ರವಾಗಿದ್ದು, ರಾಮನಗರ&ಕನಕಪುರ ರಸ್ತೆ ರಾಜ್ಯ ಹೆದ್ದಾರಿ ಜತೆಗೆ ಜಿಲ್ಲೆಯ ಪ್ರಮುಖ ರಸ್ತೆ ಆಗಿದೆ. ಕೈಲಾಂಚ ಗ್ರಾಮದಲ್ಲಿ ಆಸ್ಪತ್ರೆ, ಉಪತಹಸೀಲ್ದಾರ್ ಕಚೇರಿ, ಹೈಸ್ಕೂಲ್, ಬೆಸ್ಕಾಂ, ಕೃಷಿ ರೈತ ಸಂಪರ್ಕ ಕೇಂದ್ರಗಳಿದ್ದು, ನಿತ್ಯ ನೂರಾರು ಸಾರ್ವಜನಿಕರು ಕೈಲಾಂಚಕ್ಕೆ ಬಂದು ಹೋಗುತ್ತಾರೆ. ಜತೆಗೆ ಅಕ್ಕಪಕ್ಕದ ಗ್ರಾಮಗಳಿಗೆ ಇದೇ ಪ್ರಮುಖ ಸರ್ಕಲ್ ಆಗಿರುವ ಕಾರಣ ಶಾಲಾ, ಕಾಲೇಜು ವಿದ್ಯಾರ್ಥಿಗಳು, ರೈತರು, ಮಹಿಳೆಯರು ಬಸ್ ಹತ್ತಲು ಸರ್ಕಲ್ಗೆ ಬರುತ್ತಾರೆ. ಆದರೆ, ಸರ್ಕಲ್ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೆರಳಿನ ವ್ಯವಸ್ಥೆ ಇಲ್ಲ.
ಜನರು ರಸ್ತೆ ಬದಿಯಲ್ಲೇ ನಿಂತು ಬಸ್ ಹತ್ತಬೇಕು. ಬಿಸಿಲು, ಮಳೆ ವೇಳೆ ಸಮಸ್ಯೆಯಾಗುತ್ತಿದೆ. ಕೂಡಲೇ ಕೈಲಾಂಚ ಸರ್ಕಲ್ನಲ್ಲಿ ಬಸ್ ತಂಗುದಾಣ ಸ್ಥಾಪನೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಾಹನಗಳ ಭಯ
ಕನಕಪುರ&ರಾಮನಗರ ರಸ್ತೆ ಹೆದ್ದಾರಿ ಆಗಿರುವ ಕಾರಣ ವಾಹನಗಳು ವೇಗವಾಗಿ ಒಂದರ ಹಿಂದೆ ಒಂದರಂತೆ ಚಲಿಸುತ್ತಿರುತ್ತವೆ. ಬಸ್ಗಾಗಿ ರಸ್ತೆ ಪಕ್ಕದಲ್ಲಿ ಕಾಯುವ ಪ್ರಯಾಣಿಕರಿಗೆ ವಾಹನಗಳ ಓಡಾಟ ಭಯ, ಆತಂಕ ತರಿಸುತ್ತವೆ. ಬಸ್ ತಂಗುದಾಣ ಇದ್ದರೆ ಆತಂಕ ಇಲ್ಲದೆ ನಿಲ್ದಾಣದಲ್ಲಿ ಕುಳಿತು ಬಸ್ ಬಂದಾಗ ಬಸ್ ಏರಿ ಹೋಗಬಹುದಾಗಿದೆ.
ಮಳೆ&ಬಿಸಿಲಿನಲ್ಲಿ ಕಷ್ಟ
ಬಸ್ ನಿಲ್ದಾಣದಲ್ಲಿ ನೆರಳಿನ ಆಶ್ರಯವಾಗಿ ಯಾವುದೇ ತಂಗುದಾಣ ಇಲ್ಲದಿರುವ ಕಾರಣ ಜನರು ರಸ್ತೆ ಬದಿಯೇ ನಿಲ್ಲಬೇಕು. ಮಳೆ ಬಂದರೆ ಅಕ್ಕಪಕ್ಕದ ಅಂಗಡಿಗಳ ಮುಂದೆ ಕಿರಿದಾದ ಜಾಗಗಳಲ್ಲಿ ನಿಂತು ಮಳೆಯಲ್ಲಿ ತೊಯ್ಯುತ್ತಾ ನಿಲ್ಲಬೇಕಿದೆ. ಬೇಸಿಗೆ ಕಾಲದಲ್ಲಿ ಬಿಸಿಲಿನ ಜತೆಗೆ ರಸ್ತೆಯ ಧೂಳು ಕುಡಿಯುತ್ತಾ ನಿಲ್ಲಬೇಕು ಎಂಬುದು ಜನರ ಮಾತು.
ಪ್ರಮುಖ ಸರ್ಕಲ್
ಕೈಲಾಂಚ ಗ್ರಾಮ ನಾಗೋಹಳ್ಳಿ, ವಡ್ಡರಹಳ್ಳಿ, ಅಂಕನಹಳ್ಳಿ, ಕವಣಾಪುರ, ಗೌಡಯ್ಯನದೊಡ್ಡಿ, ಮೂಗಯ್ಯನದೊಡ್ಡಿ ಇತರ ಗ್ರಾಮಗಳಿಗೆ ಪ್ರಮುಖ ಸರ್ಕಲ್ ಗ್ರಾಮವಾಗಿದೆ. ಇದರಿಂದ ಶಾಲಾ ಕಾಲೇಜಿಗೆ ರಾಮನಗರ ಮತ್ತು ಕನಕಪುರಕ್ಕೆ ಹೋಗಿ ಬರಲು ಬಸ್ ಏರಲು ಕೈಲಾಂಚ ಸರ್ಕಲ್ಗೆ ಬರುತ್ತಾರೆ. ಇದರಿಂದ ಪ್ರಮುಖ ಸರ್ಕಲ್ ಆಗಿದೆ. ಜತೆಗೆ ಹೋಬಳಿ ಕೇಂದ್ರವಾಗಿರುವ ಕಾರಣ ಜನರ ಓಡಾಟವೂ ಹೆಚ್ಚಿದೆ.
ಕೋಟ್))))))
ಕೈಲಾಂಚ ಹೋಬಳಿ ಕೇಂದ್ರವಾಗಿದ್ದು, ರಾಜ್ಯ ಹೆದ್ದಾರಿ ರಸ್ತೆ ಆಗಿರುವ ಕಾರಣ ಪ್ರಯಾಣಿಕರು ಬಸ್ಗಾಗಿ ರಸ್ತೆಯಲ್ಲಿ ನಿಲ್ಲಬೇಕು. ಹೆಣ್ಣುಮಕ್ಕಳು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ತಂಗುದಾಣದ ಅವಶ್ಯಕತೆ ಇದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಸ್ ತಂಗುದಾಣ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ.
> ಸುರೇಶ್, ಕೈಲಾಂಚ
ಕೋಟ್))))))
ಕೈಲಾಂಚ ಸರ್ಕಲ್ನಲ್ಲಿ ಬಸ್ ತಂಗುದಾಣದ ಅವಶ್ಯಕತೆ ಇದ್ದು, ಬಸ್ ತಂಗುದಾಣ ನಿರ್ಮಾಣ ಮಾಡಿಸಿಕೊಡುವಂತೆ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಮನವಿ ಮಾಡಲಾಗಿದೆ.ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೂ ಪತ್ರ ಬರೆಯಲಾಗುತ್ತದೆ.
> ದಾಸೇಗೌಡ, ಗ್ರಾಪಂ ಸದಸ್ಯ, ಕೈಲಾಂಚ