ಲಕ್ಷ್ಮೇಶ್ವರ: ಉಚಿತ ಸಾರಿಗೆಯ ಶಕ್ತಿ ಯೋಜನೆ ಸಾಕಾರಗೊಂಡ 3ನೇ ದಿನವೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ಪಟ್ಟಣದ ಬಸ್ ನಿಲ್ದಾಣ ದಿನವಿಡೀ ಪ್ರಯಾಣಿಕರಿಂದ ತುಂಬಿತ್ತು.
ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಸಮರ್ಪಕ ಬಸ್‌ಗಳು ಇಲ್ಲದಿರುವುದು ಸಮಸ್ಯೆಯ ತೀವ್ರತೆಗೆ ಕಾರಣವಾಗುತ್ತಿದೆ. ಬರುವ ಬಸ್‌ಗಳು ತುಂಬಿಕೊಂಡೇ ಬರುವುದರಿಂದ ಪ್ರಯಾ ಣಿಕರು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಮುಂದುವರಿದಿದೆ.
ಖಾಸಗಿ ವಾಹನ, ಗೂಡ್ಸ್, ಟಂಟಂ ಇತರ ವಾಹನ ನಂಬಿದ ಪ್ರಯಾಣಿಕರೆಲ್ಲರೂ ಬಸ್ಸಿನತ್ತ ಮುಖ ಮಾಡಿದ್ದರಿಂದ ಅನಿವಾರ‌್ಯವಾಗಿ ಸಾರಿಗೆ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.
ಸೋಮವಾರ ದಾಖಲೆ ಕಲೆಕ್ಷನ್: ನಿತ್ಯ ಲಕ್ಷ್ಮೇಶ್ವರ ಸಾರಿಗೆ ಘಟಕದಿಂದ ಓಡುವ 65 ಬಸ್‌ಗಳಿಂದ 6 ಲಕ್ಷ ರೂ. ಕಲೆಕ್ಷನ್ ಆಗುತ್ತಿತ್ತು. ಆದರೆ, ಮಂಗಳವಾರ ಉಚಿತ ಸಾರಿಗೆ ಪರಿಣಾಮದಿಂದ 8 ಲಕ್ಷಕ್ಕೂ ಹೆಚ್ಚು ಕಲೆಕ್ಸನ್ ಆಗಿದೆ. ಇದರಲ್ಲಿ ಮಹಿಳಾ ಪ್ರಯಾಣಿಕರಿಗೆ ಸೇರಿದ ಉಚಿತ ಮೊತ್ತ 3 ಲಕ್ಷ 33 ಸಾವಿರ ರೂ. ಆಗಿದೆ.
ಮಂಗಳವಾರವೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಆದರೂ ಸೋಮವಾರಕ್ಕಿಂತ ಕಡಿಮೆ ಇದ್ದುದರಿಂದ ಒಂದಷ್ಟು ತಡವಾದರೂ ಪ್ರಯಾಣಿಕರಿಗೆ ಬಸ್‌ನ ಸೇವೆ ಕಲ್ಪಿಸಲಾಗಿದೆ. ಪ್ರಯಾಣಿಕರು ಒಂದಷ್ಟು ಸಮಾಧಾನದಿಂದ ಮತ್ತೊಂದು ಬಸ್ ಬರುವವರೆಗೂ ಕಾಯಬೇಕು. ಇದರಿಂದ ನೂಕಾಟ-ತಳ್ಳಾಟ ತಪ್ಪುತ್ತದೆ. ಲಕ್ಷ್ಮೇಶ್ವರ ಘಟಕಕ್ಕೆ ಇನ್ನಷ್ಟು ಬಸ್‌ಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಪರಿಗಣಿಸಿ ಆಯಾ ಮಾರ್ಗಕ್ಕೆ ಬಸ್‌ನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. - ಸವಿತಾ ಆದಿ ಘಟಕ ವ್ಯವಸ್ಥಾಪಕಿ