ಮಾಗಡಿ: ದೀಪಾವಳಿ ಪ್ರಯುಕ್ತ ರಜಾ ಇದ್ದ ಕಾರಣ ಸ್ವಗ್ರಾಮ, ಬಂಧುಗಳ ಮನೆಗೆ ಬಂದಿದ್ದವರು ಭಾನುವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರು, ಕುಣಿಗಲ್, ಹುಲಿದುರ್ಗ ಕಡೆಗಳಿಗೆ ತೆರಳಲು ಸಮರ್ಪಕ ಪರದಾಡುವಂತಾಯಿತು.
ಮಾಗಡಿಯಿಂದ ಬೆಂಗಳೂರಿಗೆ 50 ಕಿಮೀ ದೂರ ಇದ್ದು, ಹೆಚ್ಚಿನ ಮಂದಿ ನಿತ್ಯ ಮಾಗಡಿಯಿಂದ ಬೆಂಗಳೂರಿಗೆ ಓಡಾಡುತ್ತಾರೆ. ಆದರೆ, ಭಾನುವಾರ ಬೆಂಗಳೂರು ಸೇರಿ ಇತರೆಡೆಗೆ ತೆರಳಲು ಹೆಚ್ಚು ಪ್ರಯಾಣಿಕರಿದ್ದರೂ ಸಮರ್ಪಕ ಬಸ್‌ಗಳು ಇಲ್ಲದ ಕಾರಣ ಹಲವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲ್ಲೇ ವಾಪಸ್ ತೆರಳಿದರು.
ಬೆರಳೆಣಿಕೆಯಷ್ಟು ಬಸ್‌ಗಳೂ ಬಂದರೂ ನುಕ್ಕುನುಗ್ಗಲು ಉಂಟಾಗಿತ್ತು. ಖಾಸಗಿ ಬಸ್‌ನ ಟಾಪ್ ಮೇಲೆ ಕುಳಿತುಕೊಂಡು ಹೋಗುವ ದೃಶ್ಯವೂ ಕಂಡುಬಂದವು.
ಜತೆಗೆ, ಯಾವ, ಯಾವ ಮಾರ್ಗಗಳಿಗೆ ಬಸ್‌ಗಳು ಎಷ್ಟು ಗಂಟೆಗೆ ಬರುತ್ತವೆ ಎಂಬುದರ ಬಗ್ಗೆ ನಿಲ್ದಾಣದ ಬಳಿ ಫಲಕ ಅಳವಡಿಸಿದ ಕಾರಣ ಪ್ರಯಾಣಿಕರು ಬಂದ ಬಸ್‌ಗಳತ್ತ ದೌಡಾಯಿಸಿ ವಿಚಾರಿಸುತ್ತಿದ್ದರು. ಜತೆಗೆ ಬಸ್ ಮಾಹಿತಿ ಕೇಳಲು ನಿಲ್ದಾಣದಲ್ಲಿರುವ ಸಿಬ್ಬಂದಿಯನ್ನು ವಿಚಾರಿಸಿದರೆ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ ಎಂದು ಕೆಲ ಪ್ರಯಾಣಿಕರು ಅಲವತ್ತುಕೊಂಡರು.
ಸಾರಿಗೆ ಸಚಿವ ರಾಮಲಿಂಗರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರ ಜಿಲ್ಲೆಯಲ್ಲೆ ಇಂಥ ಸ್ಥಿತಿಯಾದರೆ ಇನ್ನೂ ಉತ್ತರ ಕರ್ನಾಟಕ ಜನರ ಸ್ಥಿತಿ ಏನು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ನಾಗರಿಕರ ಮಾತು.
ಬಗೆಹರಿಯದ ಸಮಸ್ಯೆ: ಶಾಸಕಎಚ್.ಸಿ.ಬಾಲಕೃಷ್ಣ ಕೆಎಸ್‌ಆರ್‌ಟಿಸಿ ಡಿಸಿಯೊಂದಿಗೆ 2 ಬಾರಿ ಪ್ರಯಾಣಿಕರ ಕುಂದು ಕೊರತೆ ಸಭೆ ನಡೆಸಿ ಸಾಕಷ್ಟು ಅಹವಾಲು ಸ್ವೀಕರಿಸಿದರು. ಆದರೆ, ಪ್ರಯಾಣಿಕರ ಯಾವ ಸಮಸ್ಯೆಯೂ ಬಗೆಹರಿಯದಿರುವುದನ್ನು ನೋಡಿದರೆ ಕುಂದು ಕೊರತೆ ಸಭೆ ಕಾಟಾಚಾರಕ್ಕೆ ಎಂಬಂತಾಗಿದೆ ಎಂದು ದೂರು ನೀಡಿದವರು ಆರೋಪಿಸಿದ್ದಾರೆ.
ಅಯೋಮಯ: ಶಕ್ತಿ ಯೋಜನೆ ಜಾರಿಯಾದ ನಂತರ ಬಸ್‌ಗಳ ಸ್ಥಿತಿ ಅಯೋಮಯವಾಗಿದೆ. ಎಲ್ಲ ಬಸ್‌ಗಳಲ್ಲೂ ಪ್ರಯಾಣಿಕರ ಸಂದಣಿ ಹೆಚ್ಚಿದ್ದು, ಬಸ್ ಸಹವಾಸವೇ ಬೇಡ ಎನ್ನುವಂತಾಗಿದೆ ಎಂದು ಗೃಹಿಣಿ ಪ್ರಮೀಳಾ ತಿಳಿಸಿದರು.
ಬಸ್‌ಗಳಿಗೆ ಟಾರ್ಪಾಲ್: ಕಳೆದ 10 ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಬಹುತೇಕ ಬಸ್‌ಗಳು ಸೋರುತ್ತಿದ್ದು, ಮಳೆ ನೀರಿನಿಂದ ರಕ್ಷಣೆ ಪಡೆಯಲು ಬಸ್ ಮೇಲೆ ಟಾರ್ಪಾಲ್ ಹೊದಿಸಲಾಗಿದೆ. ಈ ಭಾಗದಲ್ಲಿ ಬಹುತೇಕ ಬಸ್‌ಗಳು ಹಳೆಯದಾಗಿದ್ದು, ನಿರ್ವಹಣೆ ಇಲ್ಲದೆ ಎಲ್ಲಂದರಲ್ಲಿ ನಿಂತು ಪ್ರಯಾಣಿಕರು ಪರದಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಅರಿವಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಶಾಲಾ-ಕಾಲೇಜುಗಳಿಗೆ ಬೆಂಗಳೂರಿಗೆ ತೆರಳಲು ಗಂಟೆಗಟ್ಟಲೆ ಕಾಯುವಂತಾಗಿದೆ, ವಿದ್ಯಾರ್ಥಿಗಳನ್ನು ಕಂಡರೆ ಕೆಲವರು ಬಸ್‌ಗಳಿಗೆ ಹತ್ತಿಸಿಕೊಳ್ಳುತ್ತಿಲ್ಲ. ಇದರಿಂದ ತರಗತಿಗೆ ತೆರಳಲು ಸಮಸ್ಯೆಯಾಗಿದೆ. ಶಾಸಕರು ನಡೆಸಿದ ಕುಂದುಕೊರತೆ ಸಭೆಯಲ್ಲಿ ಸಮಸ್ಯೆ ಬಗ್ಗೆ ತಿಳಿಸಿದರು ಪ್ರಯೋಜನವಾಗಿಲ್ಲ."
ದರ್ಶನ್, ವಿದ್ಯಾರ್ಥಿ