ಹೊನ್ನಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ನೀಡಿರುವುದನ್ನು ಖಂಡಿಸಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಅಹಿಂದ ಒಕ್ಕೂಟ ಮಂಗಳವಾರ ಹಮ್ಮಿಕೊಂಡಿದ್ದ ಹೊನ್ನಾಳಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬೆಳಗ್ಗೆ 6 ಗಂಟೆಗೆ ಆರಂಭವಾಗಿದ್ದ ಬಂದ್ ಸಂಜೆ 5 ಗಂಟೆವರೆಗೆ ನಡೆಯಿತು. ಕಾರ್ಯಕರ್ತರು ಬೈಕ್‌ಗಳಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಪೋಸ್ಟರ್ ಹಿಡಿದು ಪಟ್ಟಣದ ಪ್ರತಿ ಬೀದಿಗಳಲ್ಲಿ ಸಂಚರಿಸಿ ಅಂಗಡಿ ತೆರೆಯದಂತೆ ಮನವಿ ಮಾಡಿದರು.
ಪಟ್ಟಣದ ಎಲ್ಲ್ಲ ಬೀದಿಬದಿ ವ್ಯಾಪಾರಿಗಳು, ವರ್ತಕರು, ಹೊಟೇಲ್‌ಗಳು, ತರಕಾರಿ ಅಂಗಡಿಗಳು, ತಿಂಡಿ ಗಾಡಿಗಳು, ಬಾಗಿಲು ಮುಚ್ಚುವ ಮೂಲಕ ಬಂದ್‌ಗೆ ಸಂಪೂರ್ಣ ಸಹಕಾರ ನೀಡಿದವು. ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಡಿ.ಜಿ. ಶಾಂತನಗೌಡ, ಉತ್ತಮವಾಗಿ ಸರ್ಕಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಯಾರದೋ ಮಾತು ಕೇಳಿ ಶೋಕಾಸ್ ನೋಟಿಸ್ ನೀಡಿದ ರಾಜ್ಯಪಾಲರ ನಡವಳಿಕೆ ಸರಿಯಲ್ಲ. ಈ ಕೂಡಲೇ ಶೋಕಾಸ್ ನೋಟಿಸ್ ಹಿಂಪಡೆಯದಿದ್ದರೆ ಕಾಂಗ್ರೆಸ್‌ನಿಂದ ದೊಡ್ಡಮಟ್ಟದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿಎಂ ಪತ್ನಿ ಮುಡಾದಲ್ಲಿ ನಿವೇಶನ ಕಾನೂನುಬಾಹಿರವಾಗಿ ಪಡೆದಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಪಕ್ಷ ಸುಳ್ಳು ಆರೋಪ ಹೊರಿಸಿದೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ, ಜನ ದಡ್ಡರಲ್ಲ, ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ನೆಲಹೊನ್ನೆ ಮೋಹನ್,ಮಾದಿಗ ದಂಡೋರ ಸಮಿತಿ ಅಧ್ಯಕ್ಷ ದಿಡಗೂರು ತಮ್ಮಣ್ಣ, ಹೊನ್ನಾಳಿ, ನ್ಯಾಮತಿ ಮೈನಾರಿಟಿ ಕಮಿಟಿ ಅಧ್ಯಕ್ಷ ಚೀಲೂರು ವಾಜೀದ್, ಉಪ್ಪಾರ ಸಮಾಜದ ಅಧ್ಯಕ್ಷ ಷಣ್ಮುಖಪ್ಪ, ಬಣಜಾರ್ ಸಮಾಜದ ಅಧ್ಯಕ್ಷ ಅಂಜುನಾಯ್ಕ, ಹಾಲುಮತ ಸಮಾಜದ ಅಧ್ಯಕ್ಷ ರಾಜು ಕಡಗಣ್ಣಾರ್, ಪ್ರಜಾ ಪರಿವರ್ತನಾ ವೇದಿಕೆ ಕಾರ್ಯದರ್ಶಿ ಎ.ಡಿ. ಈಶ್ವರಪ್ಪ, ಎಚ್.ಎ. ಉಮಾಪತಿ ಮಾತನಾಡಿದರು.
ಕುರುಬ ಸಮಾಜದ ಖಜಾಂಚಿ ಎಚ್.ಎ. ನರಸಿಂಹಪ್ಪ, ಉಪಾಧ್ಯಕ್ಷ ಪುಟ್ಟಪ್ಪ, ಎ.ಡಿ. ವಿಜೇಂದ್ರಪ್ಪ, ಬೇಲಿಮಲ್ಲೂರು ನರಸಪ್ಪ, ಎಚ್.ಬಿ. ಅಣ್ಣಪ್ಪ, ಮಾದಪ್ಪ, ಕತ್ತಿಗೆ ನಾಗರಾಜ್, ಸತ್ತಿಗೆ ಸುರೇಶ್, ಕರವೇ ಯುವಸೇನೆ ಅಧ್ಯಕ್ಷ ಮಂಜು, ಮಾಜಿ ಸೈನಿಕ ಎಂ. ವಾಸಪ್ಪ, ಬೆನಕಪ್ಪ ಹರಳಹಳ್ಳಿ ಭಾಗಿಯಾಗಿದ್ದರು.
ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಅವರು ಬಂದ್ ಉದ್ದೇಶ ಕುರಿತು ಸಲ್ಲಿಸಿದ ಮನವಿ ಸ್ವೀಕರಿಸಿ ರಾಜ್ಯಪಾಲರಿಗೆ ಕಳಿಸಿಕೊಡುವುದಾಗಿ ಹೇಳಿದರು. ತಹಸೀಲ್ದಾರ್ ಪಟ್ಟರಾಜಗೌಡ, ಹೆಚ್ಚುವರಿ ಎಸ್‌ಪಿ ವಿಜಯಕುಮಾರ್ ಸಂತೋಷ್, ಡಿವೈಎಸ್‌ಪಿ ಆರ್.ಎಸ್. ಉಜ್ಜನಕೊಪ್ಪ, ಇನ್ಸ್‌ಪೆಕ್ಟರ್‌ಗಳಾದ ಸುನೀಲ್‌ಕುಮಾರ್, ರವಿ ಹಾಜರಿದ್ದರು. 200ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ನಲ್ಲಿ ಭಾಗಿಯಾಗಿದ್ದರು.
ಪ್ರಯಾಣಿಕರ ಪರದಾಟ: ಬಂದ್ ನಿಮಿತ್ತ ಖಾಸಗಿ ಬಸ್ ಸೇರಿದಂತೆ ಆಟೋ, ಮತ್ತಿತರ ವಾಹನಗಳು ಹೊನ್ನಾಳಿಗೆ ಬಾರದ ಕಾರಣ ಪ್ರಯಾಣಿಕರು ಪೇಚಿಗೆ ಸಿಲುಕಿದರು. ಶಾಲಾ ವಿದ್ಯಾರ್ಥಿಗಳು ಸಹ ತರಗತಿಗೆ ತೆರಳದೇ ವಾಪಸ್ ಮನೆಗೆ ತೆರಳುವಂತಾಯಿತು. ಬಂದ್ ಬಗ್ಗೆ ಮಾಹಿತಿ ಗೊತ್ತಿಲ್ಲದೇ ಬಂದವರು ವಾಹನಗಳಿಲ್ಲದೆ ಪರದಾಡಿದರು.