ಜಿಲ್ಲೆ

ಉಡುಪಿಯಲ್ಲಿ ಪಶ್ಚಿಮ ಜಾಗರ ಪೂಜೆ ಆರಂಭ

ಪ್ರಶಾಂತ ಜಿ. ಭಾಗ್ವತ

ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ವೈಭವ

ಪರ್ಯಾಯ ಶ್ರೀಗಳಿಂದ ದೇವರಿಗೆ ಕೂರ್ಮಾರತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಉತ್ಸವಪ್ರಿಯವಾದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಪಶ್ಚಿಮ ಜಾಗರ ಪೂಜೆ ಶುಕ್ರವಾರ (ಅ.18)ದಿಂದ ಆರಂಭಗೊಂಡಿದೆ. ಆಶ್ವೀಜ ಮಾಸದ ಶುದ್ಧ ಏಕಾದಶಿಯಿಂದ ಪ್ರಾರಂಭಗೊಂಡು ಕಾರ್ತಿಕ ಶುದ್ಧ ಏಕಾದಶಿಯವರೆಗೆ ಅಂದರೆ ಮುಂದಿನ ಒಂದು ತಿಂಗಳ ಕಾಲ ಪ್ರತಿದಿನವೂ ಬ್ರಾಹ್ಮೀ ಮುಹೂರ್ತದಲ್ಲಿ ಈ ವಿಶಿಷ್ಟ ಪೂಜಾ ವಿಧಾನ ನಡೆಯಲಿದೆ.

ಪುರಾಣದಲ್ಲಿ ಉಲ್ಲೇಖಿಸಿದಂತೆ ಆಷಾಢ ಮಾಸದ ಶುಧ್ಧ ಏಕಾದಶಿಯಿಂದ ಭಗವಂತನಾದ ವಿಷ್ಣುವು ಯೋಗನಿದ್ರೆಯಲ್ಲಿ ಇರುತ್ತಾನೆಂಬ ಪ್ರತೀತಿ ಇದೆ. ಈ ಸಂದರ್ಭದಲ್ಲಿ ಚಾತುಮಾರ್ಸ್ಯ ವೃತವೂ ಸಹ ಆರಂಭಗೊಂಡಿರುತ್ತದೆ. ಇದೀಗ ಭಗವಂತನು ಯೋಗನಿದ್ರೆಯಿಂದ ಏಳಲಿದ್ದು, ತನ್ನಿಮಿತ್ತ ಪರ್ಯಾಯ ಶ್ರೀಗಳು ಶ್ರೀಕೃಷ್ಣನಿಗೆ ವಿಶೇಷ ದೀಪಗಳಾರತಿ ಬೆಳಗಿ ಪೂಜಿಸುತ್ತಾರೆ.

ವಿವಿಧ ವಾದ್ಯಗಳ ಸೇವೆ

ಯೋಗನಿದ್ರೆಯಲ್ಲಿರುವ ದೇವರನ್ನು ಎಬ್ಬಿಸಲು ವಿವಿಧ ಹಾಗೂ ವಿಶೇಷ ಪ್ರಕಾರಗಳ ವಾದ್ಯಗಳನ್ನು ನುಡಿಸಲಾಗುತ್ತದೆ. ನುರಿತ ವಾದ್ಯ ಕಲಾವಿದರು ಈ ಒಂದು ತಿಂಗಳ ಅವಧಿಯಲ್ಲಿ ನಸುಕಿನ ವೇಳೆಯಲ್ಲಿ ಅಪೂರ್ವ ವಾದ್ಯಘೋಷಗಳ ಸೇವೆ ನೀಡುತ್ತಾರೆ. ಇದು ಪಶ್ಚಿಮ ಜಾಗರ ಪೂಜೆಯ ವಿಶೇಷತೆಯಾಗಿದೆ. ಇಂತಹ ಪೂಜಾ ವಿಧಾನ ಉಡುಪಿ ಮಠದಲ್ಲಿ ಮಾತ್ರ ಇರುವುದು ವಿಶೇಷ. ಭಗವಂತನನ್ನು ಎಚ್ಚರಿಸಲು ಭಕ್ತರು ಕೈಗೊಳ್ಳುವ ಸೇವೆ ಇದಾಗಿದ್ದು, ಈ ಪೂಜಾ ಆಚರಣೆಯನ್ನು ವರಾಹ ಪುರಾಣದಲ್ಲಿ ಉಲ್ಲೇಖಿಸಿದ ರೀತಿಯಲ್ಲಿ ಮಧ್ವಾಚಾರ್ಯರು ಚಾಲ್ತಿಗೆ ತಂದಿದ್ದಾರೆ.

ವಿಶಿಷ್ಟ ಸೂರ್ಯ ವಾದ್ಯ

ಮಠದಲ್ಲಿ ನಸುಕಿನ 4 ಗಂಟೆಯಿಂದ ವಿವಿಧ ವಾದ್ಯಘೋಷಗಳು ಆರಂಭಗೊಳ್ಳುತ್ತವೆ. ಅನುಕ್ರಮವಾಗಿ ಶಂಖ, ನಗಾರಿ, ಡಮರು, ಡೋಲು, ಕೊಂಬು, ಚರ್ಮ ವಾದ್ಯ, ತಾಸೆ, ಸೂರ್ಯ ವಾದ್ಯ, ನಾಗಸ್ವರ, ಡೋಲಕ್​, ಚಂಡೆ, ಶಹನಾಯಿ ವಾದನ ನಡೆಯುತ್ತದೆ. ಇವುಗಳಲ್ಲಿ ಸೂರ್ಯ ವಾದ್ಯವು ವಿಶಿಷ್ಟವಾಗಿದೆ. ಅದನ್ನು ತಲೆಗೆ ಕಿರೀಟದಂತೆ ತೊಟ್ಟು ಎರಡೂ ಕೈಗಳಲ್ಲಿ ವಿಶೇಷ ಕೋಲುಗಳನ್ನು ಹಿಡಿದು ನುಡಿಸಲಾಗುತ್ತದೆ. ಇದೇ ವೇಳೆ ಭಾಗವತರು ಪುರಂದರ, ಕನಕ ಮೊದಲಾದ ದಾಸವರೇಣ್ಯರ ಪದಗಳನ್ನು ಉದಯರಾಗದೊಂದಿಗೆ ಹಾಡುತ್ತಾರೆ.

ಹಣತೆಗಳ ಬೆಳಕಿನ ಸೊಬಗು

ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪಟ್ಟದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಪಶ್ಚಿಮ ಜಾಗರದ ನಿಮಿತ್ತ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ಸೂಯೋರ್ದಯಕ್ಕೆ ಮೊದಲು ಪ್ರಾರ್ಥನೆ ಸಲ್ಲಿಸಿ ಸಾಂಪ್ರದಾಯಿಕ ಕೂರ್ಮಾರತಿ ಬೆಳಗಿದರು. ಬಳಿಕ ಗರ್ಭಗುಡಿಯ ಹೊರಗಿನಿಂದ ಒಂದು ಸುತ್ತುಹಾಕಿ ಬಂದು ಶ್ರೀಕೃಷ್ಣ ದೇವರಿಗೆ ಬೆಳಗಿದರು. ತದನಂತರ ಕೂರ್ಮಾರತಿಯನ್ನು ಲಕ್ಷ್ಮೀ ಸನ್ನಿಧಾನವಿರುವ ತುಳಸಿ, ಮುಖ್ಯಪ್ರಾಣ, ಮಧ್ವಾಚಾರ್ಯರು ಹಾಗೂ ಗರುಡ ದೇವರಿಗೆ ಬೆಳಗಿದರು. ಇಲ್ಲಿಯೂ ಸಹ ವಿವಿಧ ವಾದ್ಯಗಳಾದ ಜಂಪೆ, ರೂಪಕ, ತ್ರಿಪುಟ, ಆದಿ, ಸಂಕೀರ್ಣ, ತಾಳವನ್ನು ಕಲಾವಿದರು ಗರ್ಭಗುಡಿಯ ಸುತ್ತಲೂ ನುಡಿಸುತ್ತ ಐದು ಸುತ್ತು ಬರುತ್ತಾರೆ. ಈ ವೇಳೆ ವಿದ್ಯುತ್​ ದೀಪದ ಬದಲು ಸುತ್ತಲೂ ಹಣತೆ ಹಚ್ಚಲಾಗುತ್ತದೆ. ಸಣ್ಣ ಸಣ್ಣ ಹಣತೆಗಳಲ್ಲಿ ಪ್ರಜ್ವಲಿಸುವ ದೀಪಗಳಿಂದ ಉಂಟಾದ ಬೆಳಕೂ ಸಹ ವಿಶಿಷ್ಟ ಭಕ್ತಿಯನ್ನು ಜಾಗೃತಗೊಳಿಸುತ್ತವೆ ಎಂದು ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.
ಯೋಗನಿದ್ರೆಯಲ್ಲಿರುವ ಭಗವಂತನಿಗೆ ಪೂಜಾರತಿ, ವಿವಿಧ ವಾದ್ಯಗಳ ಮೂಲಕ ಎಬ್ಬಿಸುವುದು ಅಥವಾ ಎಚ್ಚರಗೊಳಿಸಿವುದು ಪಶ್ಚಿಮ ಜಾಗರ ಆಚರಣೆಯ ವಿಶೇಷತೆ. ಈ ರೀತಿಯ ಪೂಜಾ ವಿಧಾನ ಇರುವುದು ಉಡುಪಿ ಮಠದಲ್ಲಿ ಮಾತ್ರ. ಇದು ಒಂದು ತಿಂಗಳ ಕಾಲ ನಡೆಯುತ್ತದೆ. ಕೃಷ್ಣನ ಭಕ್ತರು ಜಾಗರ ಪೂಜೆಯಲ್ಲಿ ಪಾಲ್ಗೊಳ್ಳಬಹುದು. ದೇವರಾಧನೆಯ ಈ ವೀಕ್ಷಣೆಯೂ ಪುಣ್ಯತಮವಾಗಿದೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ