ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ಸರ್ವಜ್ಞ ಪೀಠಕ್ಕೆ ಸುವರ್ಣ ಕವಚ ಸಮರ್ಪಣೆ
* ಸನ್ಯಾಸ ದೀಕ್ಷೆಯ ಸುವರ್ಣ ಮಹೋತ್ಸವದ ಕೊಡುಗೆ
ಪುತ್ತಿಗೆ ಮಠದ ಪೀಠಾಧಿಪತಿಯಾಗಿ 50 ವರ್ಷ ಕಳೆದಿದ್ದು, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ನಮಗೆ ಪೀಠ ಕೊಟ್ಟು ಸದಾ ಅನುಗ್ರಹಿಸುತ್ತಿರುವ ಶ್ರೀಮಧ್ವಾಚಾರ್ಯರಿಗೆ ಕೊಡುಗೆ ನೀಡಲು ವಿಶ್ವದ ಏಕೈಕ ಹಾಗೂ ಶ್ರೇಷ್ಠವಾದ ಸರ್ವಜ್ಞ ಪೀಠಕ್ಕೆ ಸುವರ್ಣ ಕವಚ ಸಮರ್ಪಿಸಿದ್ದೇವೆ. ಯತಿಗಳ ವೈಭವಕ್ಕಾಗಿ ಈ ಕಾರ್ಯ ಮಾಡಲಾಗಿದೆ ಎಂದು ಅನೇಕರು ತಪ್ಪು ತಿಳಿದಿದ್ದಾರೆ. ಸರ್ವಜ್ಞ ಪೀಠದ ಮಹಿಮೆ, ಸ್ಥಳದ ಮಹತ್ವ, ಮಧ್ವ ತತ್ತ್ವವನ್ನು ಮತ್ತೊಮ್ಮೆ ಜನಮಾನಸಕ್ಕೆ ತಲುಪಿಸುವುದು ಇದರ ಉದ್ದೇಶವಾಗಿದೆ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಶ್ರೀಕೃಷ್ಣ ಮಠದೊಳಗೆ ಇರುವ ಸರ್ವಜ್ಞ ಪೀಠಕ್ಕೆ ಎಲ್ಲ ಅಷ್ಟ ಮಠಗಳ ಯತಿಗಳ ಪರವಾಗಿ ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಸೌರಯುಗಾದಿ ದಿನವಾದ ಏ.14ರಂದು ಬೆಳಗ್ಗೆ ಸುವರ್ಣ ಕವಚ ಸಮರ್ಪಣೆ ಮಾಡಿಸಿ ಬಳಿಕ ಆಶೀರ್ವಚನ ನೀಡಿದರು.
ಸನ್ಯಾಸ ಜೀವನದ ಐತಿಹಾಸಿಕ ದಿನ
800 ವರ್ಷದ ಐತಿಹ್ಯವಿರುವ, ಶ್ರೀಮಧ್ವರು ಕುಳಿತಿದ್ದ ಈ ಪೀಠ ಹಾಗೂ ಈ ಸ್ಥಳದ ಮಹಿಮೆ ಎಷ್ಟು ಹೇಳಿದರೂ ಕಡಿಮೆಯೇ. ಸಾಕ್ಷಾತ್ ವಾಯುದೇವರು ಕುಳಿತ ಪೀಠವಿದು. ಶ್ರೀ ವಾದಿರಾಜರ ಬಳಿಕ ಅಷ್ಟಮಠಗಳ ಸುಮಾರು 300 ಯತಿಗಳು ಜಪ ಮಾಡಿದ ಪವಿತ್ರ ಜಾಗವಿದು. ಉಡುಪಿ ಶ್ರೀಕೃಷ್ಣನ ಸೇವಾ ಕೈಂಕರ್ಯದ ಚತುರ್ಥ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯವನ್ನಾಗಿ ಆಚರಿಸುತ್ತಿದ್ದು ಆಗಲೇ ವರ್ಷ ಕಳೆದಿದೆ. ರಜತಮಯವಾಗಿದ್ದ ಸರ್ವಜ್ಞ ಪೀಠಕ್ಕೆ ಯುಗಾದಿಯಂದು ಸುವರ್ಣ ಕವಚ ಸಮರ್ಪಿಸಿರುವುದು ನಮ್ಮ ಸನ್ಯಾಸ ಜೀವನದಲ್ಲಿ ಎಂದೂ ಮರೆಯಲಾಗದ ಐತಿಹಾಸಿಕ ದಿನವಾಗಿದೆ ಎಂದರು.
ಪೀಠಕ್ಕೆ ವಿಶೇಷ ಪೂಜೆ
ಸುವರ್ಣಮಯ ಸರ್ವಜ್ಞ ಪೀಠದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರ ಉತ್ಸವ ಮೂರ್ತಿ, ಮಧ್ವರ ಸರ್ವಮೂಲ ಗ್ರಂಥಗಳನ್ನಿಟ್ಟು ವಿಶೇಷ ಪೂಜೆ ಮಾಡಲಾಯಿತು. ಬಳಿಕ ಸುಗುಣೇಂದ್ರ ಶ್ರೀಗಳು ಸರ್ವಜ್ಞ ಪೀಠದಲ್ಲಿ ಕುಳಿತು ಉಪಸ್ಥಿತರಿದ್ದ ಎಲ್ಲ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಹರಿಸಿದರು.
ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ ತಂತ್ರಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
ಉಡುಪಿಯಾಗಲಿ ಸುವರ್ಣ ಪೀಠಪುರ
ಸರ್ವಜ್ಞ ಪೀಠಕ್ಕೆ ಸುವರ್ಣ ಕವಚ ಸಮರ್ಪಿಸಿದ ಅದಮಾರು ವಿಶ್ವಪ್ರಿಯ ಶ್ರೀ ಮಾತನಾಡಿ, ಜಗದಾದ್ಯಂತ ಪುತ್ತಿಗೆ ಶ್ರೀಗಳು 'ಸು' ವರ್ಣ ಬಿತ್ತುತ್ತಿದ್ದಾರೆ. ಹೆಸರಿನ ಮೂಲದಲ್ಲೇ ರಜತ ಇದ್ದು, ಅದನ್ನೂ ಸುವರ್ಣವಾಗಿಸಿ ಮಹತ್ಕಾರ್ಯ ಮಾಡಿದ್ದಾರೆ. ರಜತಪೀಠಪುರ ಎಂಬ ಹೆಸರಿನ ಉಡುಪಿಯನ್ನು ಸುವರ್ಣ ಪೀಠಪುರ ಎಂದು ಬದಲಾಯಿಸಿದ್ದಾರೆ. ಆರಂಭದಲ್ಲಿ ಈ ಪೀಠವು ದಾರುಮಯವಾಗಿತ್ತು. ಭೋಜರಾಜನು ಇದನ್ನು ರಜತ ಪೀಠಪುರ ಎಂದು ಮಾಡಿದ. ಸುಗುಣೇಂದ್ರರು ಆ ರಜತ ಪೀಠವನ್ನು ಸುವರ್ಣ ಪೀಠವನ್ನಾಗಿಸಿದ್ದಾರೆ. ಮುಂದೆ ಪೀಠಾರೋಹಣ ಮಾಡುವ ಎಲ್ಲ ಯತಿಗಳು 'ಸು' ವರ್ಣ ಮಾತುಗಳನ್ನೇ ಆಡಬೇಕು. ಸಮಾಜಕ್ಕೆ 'ಸು' ವರ್ಣವನ್ನೇ ಬಿತ್ತರಿಸಬೇಕು. ಪುತ್ತಿಗೆ ಶ್ರೀಗಳ ಪೀಠಾರೋಹಣದ ವಜ್ರ ಮಹೋತ್ಸವದ ಸಂದರ್ಭದಲ್ಲಿ ಈ ಪೀಠವು ವಜ್ರಮಯವಾಗಲಿ ಎಂದು ಹಾರೈಸಿದರು.
ಸುಗುಣೇಂದ್ರ ಶ್ರೀಗಳ ಈ ಕಾರ್ಯ ಸಮಯೋಚಿತವಾಗಿದೆ. ಎಲ್ಲ ಪರ್ಯಾಯ ಶ್ರೀಗಳಲ್ಲೂ ಮಧ್ವಾಚಾರ್ಯರೇ ಸನ್ನಿಹಿತವಾಗಿ ಭಗವಂತನ ಪೂಜೆ ಮಾಡುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಇಲ್ಲಿ ಆಸೀನರಾಗುವ ಎಲ್ಲ ಅಷ್ಟ ಮಠಗಳ ಪರ್ಯಾಯ ಶ್ರೀಗಳೂ ಸಹ ಸುವರ್ಣರಾಗಲಿ. ರಜತಪೀಠವಿನ್ನು ಮಹಾ ರಜತಪೀಠ ಎಂದು ಖ್ಯಾತವಾಗಲಿ.
| ವಿದ್ಯೇಶ ತೀರ್ಥ ಶ್ರೀಪಾದರು. ಭಂಡಾರಕೇರಿ ಮಠ
ಯುಗಾದಿ ನಿಮಿತ್ತ ಶ್ರೀಕೃಷ್ಣನಿಗೆ ‘ಪಾಲಯಾಚ್ಯುತ’ ಅಲಂಕಾರ ಮಾಡಲಾಗಿತ್ತು.