ಮದ್ದೂರು: ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಪರ್ವಿಜ್ ಅಹಮ್ಮದ್ ಚಿಕ್ಕ ವಯಸ್ಸಿಗೆ ಗ್ರಾಪಂ ಸದಸ್ಯರಾಗುವ ಜತೆಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಕೊಪ್ಪ ಸರ್ಕಾರಿ ಪ್ರಾಥಮಿಕ ಉರ್ದು ಪಾಠಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳಿಗೆ ಗ್ರಾಪಂ ಸದಸ್ಯ ಪರ್ವಿಜ್ ಅಹಮ್ಮದ್ ಅವರು ನೀಡಲಾದ ಶಾಲಾ ಬ್ಯಾಗ್ ಹಾಗೂ ಪಠ್ಯ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಪರ್ವಿಜ್ ಅಹಮ್ಮದ್ ಗ್ರಾಪಂ ಸದಸ್ಯರಾಗಿ ಸ್ಮಶಾನ ಅಭಿವೃದ್ಧಿ, ರಸ್ತೆ, ಚರಂಡಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಜತೆಗೆ ನಿರಂತರವಾಗಿ ಜನಗಳ ಮಧ್ಯೆ ಇದ್ದು ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಪರ್ವಿಜ್ ಅಹಮ್ಮದ್ ಅವರು ತಾವು ಸಂಪಾಪದನೆ ಮಾಡಿದ ಸ್ವಲ್ಪ ಹಣದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ನಿರಂತರವಾಗಿ ನೋಟ್ ಬುಕ್, ಸ್ಕೂಲ್ ಬ್ಯಾಗ್ ಸೇರಿದಂತೆ ಪಠ್ಯ ಪರಿಕರಗಳನ್ನು ವಿತರಣೆ ಮಾಡುತ್ತಿರುವುದು ಅವರಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮೇಲಿರುವ ಕಾಳಜಿ ತೋರಿಸುತ್ತಿದೆ. ಮುಂದೆಯೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ನೊಂದವರಿಗೆ ಸಹಾಯ ಹಸ್ತ ಚಾಚಲಿ ಎಂದು ಹಾರೈಸಿದರು.
ಗ್ರಾಪಂ ಸದಸ್ಯ ಪರ್ವಿಜ್ ಅಹಮ್ಮದ್ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು, ದಾನಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು ಮುಂದಾಗುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುವಂತೆ ಮಾಡಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಸಮವಸ್ತ್ರ ಹಾಗೂ ನುರಿತ ಶಿಕ್ಷಕರು ಇರುವುದರಿಂದ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ಜನರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ ಎಂದರು.
ಮುಖ್ಯ ಶಿಕ್ಷಕರಾದ ತಾಸಿನ, ರವಿ, ಶಿಕ್ಷಕರಾದ ಆನಂದ್, ಸೌಜನ್ಯ, ಗೀತಾ ಶಾಲಿನಿ, ಮುಖಂಡರಾದ ಶಬೀರ್, ಕಲಿಲ್, ಗಿರೀಶ್, ಹನೀಫ್, ತೋಸೀಫ್ ಹಾಗೂ ದಸ್ತಾಗೀರ್ ಇದ್ದರು.