ಕನಕಗಿರಿ: ಪ್ರಥಮ ಪೂಜಿತ, ವಿಘ್ನ ನಿವಾರಕ, ಪಾರ್ವತಿ ತನಯ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಗಣೇಶನ ಹಬ್ಬವನ್ನು ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಜನತೆ ಶನಿವಾರ ಸಂಭ್ರಮದಿಂದ ಆಚರಿಸಿದರು.
ಇದನ್ನೂ ಓದಿ: ಕರ್ನಾಟಕಕ್ಕೆ ಗಣೇಶ ಹಬ್ಬದ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ; ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಅಸ್ತು!
ಗಣೇಶ ಹಬ್ಬದ ನಿಮಿತ್ತ ಕನಕಾಚಲ ದೇವಸ್ಥಾನದ ದ್ವಾರ ಬಾಗಿಲಿನ ಗಣೇಶನ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಮನೆಗಳಲ್ಲಿ ಗಣೇಶ ಪ್ರತಿಷ್ಠಾಪಿಸುವವರು ಮನೆಯ ಒಂದು ಭಾಗದಲ್ಲಿ ಪೂಜೆಗಾಗಿ ಅಲಂಕಾರ ಮಾಡಿ ಗಣಪತಿಯನ್ನು ತಂದು ಪೂಜಿಸಿದರು. ಕಡಿಗಡುಬು ತಯಾರಿಸಿ ನೈವೇದ್ಯ ಅರ್ಪಿಸಿ ರಾತ್ರಿ ಮೂರ್ತಿ ವಿಸರ್ಜನೆ ಮಾಡಿದರು.
ಜಿಟಿಜಿಟಿ ಮಳೆ ಗಣೇಶ ವಿಸರ್ಜನೆಗೆ ಅಡ್ಡಿಯಾಯಿತು. ಕೆಲ ಮನೆಗಳಲ್ಲಿ ತಿಂಗಳವರೆಗೆ ಗಣೇಶನನ್ನು ಕೂರಿಸಿ ಪೂಜಿಸಲಾಗುತ್ತಿದೆ. ಇಲ್ಲಿನ ಎಸ್ಸಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ ವಿಸರ್ಜನೆ ಮಾಡಲಾಯಿತು.
ಇನ್ನು ಪೊಲೀಸ್ ಕ್ವಾಟ್ರಸ್‌ನಲ್ಲಿನ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರಿಗೆ ಪೊಲೀಸರು ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.
ನಾನಾ ಗಜಾನನ ಸಮಿತಿಗಳಿಂದ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಗಳನ್ನು ಬೆಳಿಗ್ಗೆಯಿಂದಲೇ ಗಂಗಾವತಿ, ಹೊಸಪೇಟೆ, ಲಿಂಗಸುಗೂರು ಸೇರಿ ಹಲವೆಡೆಗಳಿಂದ ಮೆರವಣಿಗೆಯಲ್ಲಿ ತಂದರು.
ಶನಿವಾರ ಆಗಾಗ ಮಳೆ ಸುರಿಯುತ್ತಿದ್ದರಿಂದ ಮೆರವಣಿಗೆಗೆ ಕೆಲ ಕಾಲ ತೊಂದರೆಯಾಯಿತು. ಬಾಬಾ ಜಗಜೀವನ್‌ರಾಮ್ ವೃತ್ತ, ಶಿವಾಜಿನಗರದಲ್ಲಿನ ಕನಕಗಿರಿ ಕಾ ಸಪ್ತ ಸಾಮ್ರಾಟ್ ಗಣೇಶ, ಹೇಮರೆಡ್ಡಿ ಮಲ್ಲಮ್ಮ ವೃತ್ತ, ಭಾವಸಾರ ಸಮಾಜ, 13ನೇ ವಾರ್ಡಿನ ಸಿದ್ದಿವಿನಾಯಕ,
ಪೇಟೆ ಬಸವೇಶ್ವರ ದೇವಸ್ಥಾನ, ಒಗ್ಗಟ್ಟಿನ ಗಜಾನನ ಸಮಿತಿ, ತೆಗ್ಗಿನಮನಿ ಓಣಿ, ಮೋಚಿ ಓಣಿ ಸೇರಿ ನಾನಾ ಕಡೆಗಳಲ್ಲಿ ಯುವಕರು ಸಂಭ್ರಮದಿಂದ ಗಣೇಶನನ್ನು ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಕನಕಾಚಲ ದೇವಸ್ಥಾನದ ದಕ್ಷಿಣ ದ್ವಾರದಲ್ಲಿ ಇಡಲಾಗಿದ್ದ ಗಣೇಶನನ್ನು ಒಂದನೇ ದಿನಕ್ಕೆ ವಿಸರ್ಜಿಸಲಾಯಿತು.
ಗ್ರಾಮೀಣ ಭಾಗದಲ್ಲೂ ಜೋರು: ನಾಗಲಾಪುರ, ಮುಸಲಾಪುರ, ಸೋಮಸಾಗರ, ಕನ್ನೇರಮಡು, ಹಿರೇಖೇಡ, ಚಿಕ್ಕಮಾದಿನಾಳ, ಗೋಡಿನಾಳ, ಕಾಟಾಪುರ, ಗುಡುದೂರು, ಕೆ.ಮಲ್ಲಾಪುರ, ಜೀರಾಳ, ತಿಪ್ಪನಾಳ, ಸುಳೇಕಲ್, ಬಂಕಾಪುರ ಸೇರಿ ನಾನಾ ಗ್ರಾಮಗಳಲ್ಲೂ ಯುವಕರು ಗಣೇಶನನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.