ಮೈಸೂರು: ರಾಷ್ಟ್ರೀಯ ರಂಗಹಬ್ಬ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ದ ಯಶಸ್ಸಿನ ಖುಷಿಯಲ್ಲಿರುವ ರಂಗಾಯಣವು ಗುರುವಾರ ‘ಪರ್ವ’ ನಾಟಕದ ರಾಜ್ಯ ಪ್ರವಾಸ ಆರಂಭಿಸಿತು.
ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಪ್ರಸ್ತುತಪಡಿಸುತ್ತಿರುವ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ರಚಿತ ಕಾದಂಬರಿ ‘ಪರ್ವ’ ನಾಟಕದ ಕಂಪನ್ನು ಇಡೀ ದೇಶಕ್ಕೆ ಹಂಚಲು ರಂಗಾಯಣವು ಮುಂದಾಗಿದ್ದು, ಎರಡು ಹಂತದಲ್ಲಿ ರಾಜ್ಯ ಪ್ರವಾಸ ಹಾಗೂ ಒಂದು ಹಂತದಲ್ಲಿ ರಾಷ್ಟ್ರ ಪ್ರವಾಸ ಮಾಡಲಿದೆ.
ಗುರುವಾರ ರಂಗಾಯಣ ಅಂಗಳದಲ್ಲಿ ‘ಪರ್ವ’ ನಾಟಕದ ಮೊದಲ ಹಂತದ ರಾಜ್ಯ ಪ್ರವಾಸಕ್ಕೆ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಚಾಲನೆ ನೀಡಿ ಶುಭ ಕೋರದರು. ಈಗಾಗಲೇ ಅನೇಕ ಪ್ರದರ್ಶನ ಕಂಡಿರುವ ಪರ್ವ ನಾಟಕವು ರಂಗಾಸಕ್ತರ ಮೆಚ್ಚುಗೆ ಪಡೆದಿದೆ. ಮೈಸೂರು ಮತ್ತು ಬೆಂಗಳೂರಿನ ಅನೇಕರು ನಾಟಕದ ಸವಿ ಸವಿದಿದ್ದಾರೆ. ಎಲ್ಲರೂ ನಾಟಕಕ್ಕೆ ಜೈಕಾರ ಹಾಕಿದ್ದಾರೆ. ಈಗ ಪರ್ವ ತಂಡ ರಾಜ್ಯ ಪ್ರವಾಸ ಆರಂಭಿಸಿರುವುದು ಖುಷಿಯ ವಿಚಾರ. ರಾಜ್ಯದ ಎಲ್ಲ ಭಾಗದ ಜನರೂ ಪರ್ವಕ್ಕಾಗಿ ಕಾಯುತ್ತಿದ್ದಾರೆ. ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಪರ್ವ ಪ್ರವಾಸ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ದಾವಣಗೆರೆಯ ಗುಂಡಿ ಮಹಾದೇವಪ್ಪನವರ ಕಲ್ಯಾಣಮಂಟಪದಲ್ಲಿ ಏಪ್ರಿಲ್ 9 ರಂದು ಸಂಜೆ 4 ಗಂಟೆಗೆ ಮೊದಲ ಪ್ರದರ್ಶನ ನಡೆಯಲಿದೆ. ಧಾರವಾಡದ ಸೃಜನ ರಂಗಮಂದಿರದಲ್ಲಿ 12 ಮತ್ತು 13 ರಂದು ಬೆಳಗ್ಗೆ 10.30ಕ್ಕೆ, ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ 16 ಮತ್ತು 17 ರಂದು ಮಧ್ಯಾಹ್ನ 3.30 ಕ್ಕೆ, ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ 20 ರಂದು ಮಧ್ಯಾಹ್ನ 3.30ಕ್ಕೆ, ಕಲಬುರಗಿ ರಂಗಾಯಣದಲ್ಲಿ 22 ರಂದು ಸಂಜೆ 4 ಗಂಟೆಗೆ ಪ್ರದರ್ಶನ ನಡೆಯಲಿದೆ. ಬಳಿಕ ಪರ್ವ ತಂಡ 23ಕ್ಕೆ ಮೈಸೂರಿಗೆ ನಿರ್ಗಮಿಸಲದೆ ಎಂದರು.
ಮೇ ಮೊದಲ ವಾರದಿಂದ ಎರಡನೇ ಹಂತದ ರಾಜ್ಯ ಪ್ರವಾಸ ಆರಂಭವಾಗಲಿದ್ದು, ಹಾಸನ, ಶಿವಮೊಗ್ಗ, ಮಂಗಳೂರು, ಮೂಡಬಿದಿರೆ, ಬೆಂಗಳೂರು, ಉಡುಪಿ, ಚಿಕ್ಕಮಗಳೂರಿನಲ್ಲಿ ಪ್ರದರ್ಶನ ನಡೆಯಲಿದೆ ಎಂದರು. ಮೇ ಕಡೇ ವಾರದಲ್ಲಿ ರಾಷ್ಟ್ರ ಪ್ರವಾಸ ಆರಂಭವಾಗಲಿದ್ದು, ಮುಂಬೈ, ನಾಗ್‌ಪುರ್, ದೆಹಲಿ, ಭೂಪಾಲ್ ಸೇರಿದಂತೆ ವಿವಿಧೆಡೆ ಪ್ರದರ್ಶನ ಆಯೋಜಿಸಲಾಗುತ್ತದೆ ಎಂದು ಕಾರ್ಯಪ್ಪ ವಿವರಿಸಿದರು. ಕಲಾವಿದರು, ತಂತ್ರಜ್ಞರು ಸೇರಿದಂತೆ 35 ಜನರ ತಂಡ ಪ್ರವಾಸ ಆರಂಭಿಸಿದೆ.
ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.