ಜಿಲ್ಲೆ

ಪಕ್ಷ ವಿರೋಧಿಗಳನ್ನು ಉಚ್ಛಾಟಿಸಬೇಕು

Davangere - Desk - Mahesh Babu E

ನಾಯಕನಹಟ್ಟಿ: ಪಕ್ಷ ವಿರೋಧಿ ಚಟುವಟಿಕೆಗಳನ್ನು ಕೈಗೊಂಡ ಮುಖಂಡರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.

ಸಮೀಪದ ತಳಕು ಹೋಬಳಿಯ ಹೊಸಹಳ್ಳಿಯಲ್ಲಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಆಗ್ರಹಿಸಿದರು.

ಕ್ಷೇತ್ರದ ಅಸ್ತಿತ್ವದಲ್ಲಿ ಇಲ್ಲದ ಪಕ್ಷವನ್ನು ಗೆಲುವಿಗೆ ತರಲು ಯತ್ನಿಸಿದ್ದೇನೆ. ಪಕ್ಷದ ಮುಖಂಡರೇ ಆಗಿದ್ದ ಕೆಲವರು ಪಕ್ಷದಲ್ಲಿದ್ದುಕೊಂಡು ನನ್ನ ವಿರುದ್ಧ ಪ್ರಚಾರ ಮಾಡಿದರು. ಕಾಂಗ್ರೆಸ್ ಗೆಲುವಿಗೆ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಇಂಥಹವರನ್ನು ಪಕ್ಷದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಹೇಗೆ ಸಾಧ್ಯವಿದೆ ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಜಿಪಂ ತಾಪಂ ಚುನಾವಣೆಗಳಿವೆ. ಪಕ್ಷಕ್ಕೆ ಕಾರ್ಯಕರ್ತರಿದ್ದಾರೆ. ಆದರೆ, ಮುಖಂಡರುಗಳು ಪಕ್ಷವಿರೋಧಿ ಚಟುವಟಿಕೆಗಳಿಂದ ಪಕ್ಷ ಹಾಳಾಗುತ್ತಿದೆ. ಇಂಥಹ ಮುಖಂಡರುಗಳನ್ನು ಹೊರಗೆ ಹಾಕಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ನಾರಾಯಣಸ್ವಾಮಿ, ಮುಖಂಡರ ನಡುವಿನ ಸಮಸ್ಯೆಗಳನ್ನು ಬಹಿರಂಗವಾಗಿ ಚರ್ಚೆ ಮಾಡುವುದು ಬೇಡ. ಪಕ್ಷಕ್ಕೆ ಭಾರೀ ಪ್ರಮಾಣದ ಕಾರ್ಯಕರ್ತರಿದ್ದಾರೆ. ಇದರಿಂದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪಕ್ಷದ ಮುಖಂಡರ ಜತೆಗೆ ಸದಾ ಚರ್ಚೆಗೆ ಸಿದ್ಧನಿದ್ದೇನೆ. ಎಲ್ಲ ಸಮಸ್ಯೆಗಳನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡೋಣ. ಪಕ್ಷ ವಿರೋಧಿ ಚಟುವಟಿಕೆಗಳಿದ್ದರೆ ಕ್ರಮ ಕೈಗೊಳ್ಳೋಣ ಎಂದು ಸಮಾಧಾನಪಡಿಸಿದರು.

ಮಂಡಲ ಅಧ್ಯಕ್ಷರಾದ ಇ.ರಾಮರೆಡ್ಡಿ, ಡಾ.ಪಿ.ಎಂ.ಮಂಜುನಾಥ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಶಿವಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಮುಖಂಡರಾದ ಬಾಳೆಕಾಯಿ ರಾಮದಾಸ್, ಜಯಪಾಲಯ್ಯ, ಜಿಪಂ ಮಾಜಿ ಸದಸ್ಯ ಓಬಳೇಶ್, ಕೊಂಡ್ಲಹಳ್ಳಿ ರೇವಣ್ಣ, ಹಾಪ್‌ಕಾಮ್ಸ್ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಪರಮೇಶ್ವರಪ್ಪ, ಗೋವಿಂದು ಮತ್ತಿತರರಿದ್ದರು.