ಯಾದಗಿರಿ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಿಗೂ ಬಂದ್ ಆಗಿವೆ, ಬಹುತೇಕ ಶಾಲೆಗಳು ಆನ್‌ಲೈನ್ ಮೂಲಕ ಪಾಠ ಮಾಡುತ್ತಿವೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಯ ಮದ್ಯದ ಪಾರ್ಟಿ ಮಾಡಿರುವ ಆತಂಕದ ವಿಷಯ ಬೆಳಕಿಗೆ ಬಂದಿದೆ.
ಜ್ಞಾನದೇಗುಲ, ವಿದ್ಯಾದೇಗುಲ ಎಂದೇ ಪರಿಗಣಿಸಲಾಗುವ ಶಾಲೆಯಲ್ಲಿಯೇ ಶಿಕ್ಷಕರು ಇಂಥದ್ದೊಂದು ಕೃತ್ಯ ನಡೆಸಿರುವುದು ಆಘಾತಕಾರಿ ವಿಷಯವಾಗಿದೆ. ಅಷ್ಟೇ ಅಲ್ಲದೇ, ಮಕ್ಕಳ ಭವಿಷ್ಯವನ್ನು ರೂಪಿಸಬೇಕಿರುವ ಶಿಕ್ಷಕರು ಇಂಥ ಕೃತ್ಯಕ್ಕೆ ಕೈ ಹಾಕಿರುವುದು ಶಿಕ್ಷಣ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ.
ಇತರ ಶಿಕ್ಷಕರು ತಪ್ಪು ಮಾಡಿದಾಗ ಅವರಿಗೆ ತಿಳಿವಳಿಕೆ ನೀಡಬೇಕಾದ ಶಾಲೆಯೊಳಗೆ ಹೆಡ್ ಮಾಸ್ಟರ್ ನೇತೃತ್ವದಲ್ಲೇ ಇಂಥದ್ದೊಂದು ಘಟನೆ ನಡೆದಿದೆ. ಬಸ್‌ನ ಕಂಡಕ್ಟರ್ ಹಾಗೂ ಚಾಲಕರಿಗೆ ಎಣ್ಣೆ ಪಾರ್ಟಿ ನೀಡಿರುವ ಹೆಡ್‌ಮಾಸ್ಟರ್
ರಾಜಾರೋಷವಾಗಿ ಶಾಲೆಯೊಳಗೆ ಕಂಠಪೂರ್ತಿ ಕುಡಿದು ಓಲಾಡಿದ್ದಾರೆ.
ಇದೀಗ ಹೆಡ್ ಮಾಸ್ಟರ್ ಚೇಂಬರ್ ತುಂಬ ಮದ್ಯದ ಬಾಟಲಿಗಳೇ ತುಂಬಿಹೋಗಿವೆ. ಇದನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಂಥ ಶಿಕ್ಷಕರಿಂದ ತಮ್ಮ ಮಕ್ಕಳ ಭವಿಷ್ಯ ಏನಾಗಬಹುದು ಎಂಬ ಆತಂಕಗೊಂಡಿರುವ ಪಾಲಕರು ಮತ್ತು ಗ್ರಾಮಸ್ಥರು ಕುಡುಕ ಹೆಡ್ ಮಾಸ್ಟರ್ ಅಮಾನತಿಗೆ ಪಟ್ಟು ಹಿಡಿದಿದ್ದಾರೆ.