ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡ 18 ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟ ಕಾರ್ಯಕ್ರಮವನ್ನು ಬಿಂದು ರಾಣಿ ಜಿ., ಹಾಗೂ ಮತ್ತಿತರು ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಶಂಕರಗೌಡ ಸೋಮನಾಳ, ಪ್ರೊ. ಸಕ್ಪಾಲ ಹೂವಣ್ಣ ಮತ್ತಿತರರಿದ್ದಾರೆ. 
ಜಿಲ್ಲೆ

ಕ್ರೀಡೆಗಳಲ್ಲಿ ಯಶಸ್ಸಿಗಿಂತ ಭಾಗವಹಿಸುವಿಕೆ ಮುಖ್ಯ

ವಿಜಯಪುರ: ಕ್ರೀಡೆ ದೇಹಕ್ಕೆ ಶಕ್ತಿ ನೀಡುವುದರ ಜತೆಗೆ ಮನಸ್ಸಿಗೆ ಶಾಂತಿ ಮತ್ತು ಶಿಸ್ತನ್ನು ಒದಗಿಸುತ್ತದೆ ಎಂದು ಬೆಂಗಳೂರಿನ ಅಂತಾರಾಷ್ಟ್ರೀಯ ಕ್ರೀಡಾಪಟು ಬಿಂದು ರಾಣಿ ಜಿ., ಹೇಳಿದರು.

ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ 18 ನೇ ಅಂತಾರಾಷ್ಟ್ರೀಯ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಯಶಸ್ಸಿಗಿಂತ ಭಾಗವಹಿಸುವುದು ಮುಖ್ಯ ಎಂದು ಅವರು ಸಲಹೆ ನೀಡಿದರು.

ಕ್ರೀಡೆಯು ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು. ಸದ್ಯದ ದಿನಗಳಲ್ಲಿ ಕ್ರೀಡೆಯು ಕ್ರೀಡಾ ವಿಜ್ಞಾನವಾಗಿ ವಿಸ್ತಾರಗೊಂಡಿದೆ. ಆರೋಗ್ಯ ಮತ್ತು ಜೀವನಶೈಲಿಯಲ್ಲಿ ಅದರ ಪ್ರಾಮುಖ್ಯತೆ ತೋರಿಸಲಿದೆ. ಕ್ರೀಡೆಗಳು ತಾಂತ್ರಿಕ ಕೌಶಲ್ಯ ಅಷ್ಟೇ ಬೆಳೆಸದೆ, ಆತ್ಮವಿಶ್ವಾಸ, ಸಹಕಾರ ಮತ್ತು ಇಚ್ಛಾಶಕ್ತಿಯನ್ನು ಹೆಚ್ಚಿಸಲಿದೆ. ನನ್ನಲ್ಲಿ ಎಲ್ಲವೂ ಸಾಧ್ಯ ಎಂಬ ಭಾವನೆ ಪ್ರತಿಯೊಬ್ಬ ಆಟಗಾರನೊಳಗಿರುವ ಜ್ವಾಲೆಯನ್ನು ಬೆಳಗಿಸುತ್ತದೆ. ಕ್ರೀಡೆಯ ಮಹತ್ವ ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಕೆನರಾ ಬ್ಯಾಂಕಿನ ಡಿವಿಜಿನಲ್ ಮ್ಯಾನೇಜರ್ ರೇಣುಕಾ ಜಿ., ಮಾತನಾಡಿ, ಜೀವನದಲ್ಲಿ ವಿದ್ಯೆಯ ಜತೆಗೆ ಕ್ರೀಡೆಯೂ ಮಹತ್ವದ ಭಾಗವಾಗಿದೆ. ಶಿಕ್ಷಣ ಮತ್ತು ಕ್ರೀಡೆಗಳ ಸಮನ್ವಯವು ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ ಮತ್ತು ಮೌಲ್ಯಮಾಪನ ಕುಲ ಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಮಾತನಾಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 45 ಮಹಿಳಾ ಕಾಲೇಜುಗಳ ಮಹಿಳಾ ಕ್ರೀಡಾ ತಂಡಗಳು, 227 ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರೀಡಾತಂಡಗಳು ಪಥಸಂಚಲನ ನಡೆಸಿದ್ದು, ವಿಶೇಷವಾಗಿ ಮಹಿಳಾ ವಿವಿಯ ಮಹಿಳಾ ಬ್ಯಾಂಡ್ ಎಲ್ಲರ ಗಮನ ಸೆಳೆಯಿತು.

ಕ್ರೀಡಾ ನಿರ್ದೇಶಕ ಪ್ರೊ. ಸಕ್ಪಾಲ ಹೂವಣ್ಣ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ಕೆ.ಎನ್ ಹಾಗೂ ಸಂಶೋಧನಾ ವಿದ್ಯಾರ್ಥಿನಿ ಕರುಣಾ ಪರಿಚಯಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ಹನುಮಂತಯ್ಯ ಪೂಜಾರಿ ನಿರೂಪಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ರಾಜಕುಮಾರ ಮಾಲಿಪಾಟೀಲ ವಂದಿಸಿದರು.