ತಿ.ನರಸೀಪುರ ತಾಲೂಕಿನ ತಾಲೂಕಿನ ಮೇದಿನಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ತಲಕಾಡು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಎಂ.ಎನ್.ಕುಮಾರ್ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ಕುಕ್ಕೂರು ಗಣೇಶ್, ಎಸ್.ಸಿ.ಶಿವಮೂರ್ತಿ, ಕಲಾವತಿ, ನಾಗೇಶ್, ಟಿ.ಎಂ. ಮರಿಸ್ವಾಮಿ ಇತರರು ಇದ್ದರು. 
ಜಿಲ್ಲೆ

ಸೋಲು, ಗೆಲುವು ಪರಿಗಣಿಸದೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ

ತಿ.ನರಸೀಪುರ : ಪ್ರತಿ ವರ್ಷವೂ ರಾಜ್ಯ ಮತ್ತು ಅಂತಾರಾಜ್ಯ ಮಟ್ಟದ ಕ್ರೀಡಾಕೂಟಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ತಾಲೂಕಿನ ಮೇದಿನಿ ಗ್ರಾಮ ಬಳುವಳಿಯಾಗಿ ನೀಡುತ್ತಿದೆ ಎಂದು ಹೊಳೆಸಾಲು ಗ್ರಾ.ಪಂ. ಸದಸ್ಯ ಎಂ.ಎನ್.ಕುಮಾರ್ ಹೇಳಿದರು.

ತಾಲೂಕಿನ ತಾಲೂಕಿನ ಮೇದಿನಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ತಲಕಾಡು ಹೋಬಳಿ ಮಟ್ಟದ 14 ವರ್ಷ ವಯೋಮಾನದ ಶಾಲಾ ಬಾಲಕ, ಬಾಲಕಿಯರ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಥ್ಲೆಟಿಕ್ ಕ್ರೀಡಾಕೂಟಗಳಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಗೆಲ್ಲುತ್ತಿರುವುದು ಗ್ರಾಮದ ಹೆಗ್ಗಳಿಕೆಯಾಗಿದೆ ಎಂದರು.

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದಲೇ ಪಾಠದೊಂದಿಗೆ ಕ್ರೀಡಾಕೂಟಗಳಂತಹ ಪಠ್ಯೇತರ ಚಟುವಟಿಕೆಗಳ ಅಗತ್ಯವಿದೆ. ಸದೃಢ ಆರೋಗ್ಯಕ್ಕೆ ದೈಹಿಕ ಕಸರತ್ತು ಅಗತ್ಯವಿರುವುದರಿಂದ ಸೋಲು, ಗೆಲುವು ಪರಿಗಣಿಸದೆ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಹೋಬಳಿಮಟ್ಟದ ಬಳಿಕ ತಾಲೂಕು, ತದನಂತರ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಪ್ರತಿನಿಧಿಸಿ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಅವಕಾಶವಿದೆ. ಪಾಲಕರು ಮಕ್ಕಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕೆಂದು ಕರೆ ನೀಡಿದರು.

ಭೂ ನ್ಯಾಯ ಮಂಡಳಿಯ ಸದಸ್ಯ ಕುಕ್ಕೂರು ಗಣೇಶ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಶಿಕ್ಷಣ ಪಡೆಯುವ ಹಂತದಲ್ಲಿಯೇ ಮಕ್ಕಳು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಭವಿಷ್ಯದ ಬದುಕಿನಲ್ಲಿನ ಏಳುಬೀಳುಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಮುನ್ನಡೆಯಲು ವ್ಯಕ್ತಿತ್ವವನ್ನು ಪರಿಪಕ್ವಗೊಳಿಸುತ್ತದೆ. ಕ್ರೀಡಾಕೂಟದಲ್ಲಿ ಗೆಲ್ಲುವ ವಿದ್ಯಾರ್ಥಿಗಳು ಮುಂದಿನ ಕ್ರೀಡಾಕೂಟಕ್ಕೆ ಸನ್ನದ್ಧರಾಗಬೇಕು. ಸೋತಂತಹ ಮಕ್ಕಳು ಸೋಲೆ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿತು ಸೋಲಿನ ಖಿನ್ನತೆಯಿಂದ ಹೊರಬರಬೇಕು. ಶೈಕ್ಷಣಿಕ ಸಾಧನೆ ಕಡೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಾವತಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಿಆರ್‌ಸಿ ನಾಗೇಶ್, ಯಜಮಾನರಾದ ಸಿದ್ದನಾಯಕ, ಟಿಪಿಒ ಮರಿಸ್ವಾಮಿ, ಸಿಆರ್‌ಪಿ ಸಿದ್ದರಾಜು, ಇಸಿಒ ಜಗದೀಶ್, ಬಿಆರ್‌ಪಿ ಕೆ.ಪಿ.ಮಹದೇವಸ್ವಾಮಿ, ಸಿದ್ದಮಲ್ಲಪ್ಪ, ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವನಂಜು, ಕ್ರೀಡಾಕೂಟ ಸಂಘಟನೆ ಶಾಲೆಯ ಮುಖ್ಯ ಶಿಕ್ಷಕ ಟಿ.ಎಂ.ಮರಿಸ್ವಾಮಿ, ಸಹ ಶಿಕ್ಷಕರಾದ ಮಹದೇವ ಪ್ರಸಾದ್, ಪಾಲ್ ಪ್ರೇಮಚಂದ್, ಹರಿಕುಮಾರ್, ಸುರೇಶ ಕುಮಾರ್, ಮಹೇಶ್ವರಿ, ರಾಜಮ್ಮ, ಪ್ರಭಾ, ಅನಿತಾ, ಗ್ರಾಮದ ಯಜಮಾನರಾದ ಕಾಳದುಂಡ ನಾಯಕ, ವೆಂಕಟೇಶ್, ವಾಟರ್‌ಮನ್ ರಾಚಯ್ಯ, ಆರ್.ಮಹದೇವ, ಕಾಂತರಾಜು, ಕೃಷ್ಣ, ಜವರಯ್ಯ, ಶಾಲಾಭಿವೃದ್ಧಿ ಸಮಿತಿಯ ರವಿ, ರಂಗಸ್ವಾಮಿ, ಚಿಕ್ಕಮಾದ, ಕುಮಾರ ಸೇರಿದಂತೆ ಮಹಿಳಾ ಸದಸ್ಯರು, ಹೋಬಳಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

ಜಿಲ್ಲೆಯ ಗಡಿ ಗ್ರಾಮ ಮೇದಿನಿಯಲ್ಲಿ ಕ್ರೀಡಾಂಗಣವನ್ನು ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸಂಸದ ಸುನೀಲ್ ಬೋಸ್ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿ, ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು.

ಎಂ.ಎನ್.ಕುಮಾರ್

ಹೊಳೆಸಾಲು ಗ್ರಾಪಂ ಸದಸ್ಯ