ಕಾರ್ಕಳ: ಹಿಂದು ಧರ್ಮ ಜಾಗೃತಿಯೊಂದಿಗೆ, ಪರಿಸರ ಜಾಗೃತಿಯನ್ನು ಮೂಡಿಸುವ ಮಹೋನ್ನತ ಉದ್ದೇಶದೊಂದಿಗೆ ಕಾರ್ಕಳ ಹಿಂದು ಜಾಗರಣ ವೇದಿಕೆಯು ವೃಕ್ಷ ಜಾಗರಣ ಕಾರ್ಯಕ್ರಮವನ್ನು ತಾಲೂಕಿನ ಎಲ್ಲ 32 ಘಟಕಗಳಲ್ಲಿ ಆಯೋಜಿಸಿದೆ.
ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಆರಾಧ್ಯ ದೈವಗಳಾದ ಕಲ್ಲುರ್ಟಿ-ಕಲ್ಕುಡ-ತೂಕತ್ತೇರಿ ದೈವಗಳಿಗೆ ಸಂಕ್ರಾಂತಿ ಪೂಜೆ ನೆರವೇರಿಸಿ ಶ್ರೀ ಕ್ಷೇತ್ರದಲ್ಲಿ ವೃಕ್ಷ ಜಾಗರಣದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಂದಿನ ಒಂದು ತಿಂಗಳಾದ್ಯಂತ ತಾಲೂಕಿನ 32 ಘಟಕಗಳಲ್ಲಿ ಈ ವೃಕ್ಷ ಜಾಗರಣ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ ಮತ್ತು ತಾಲೂಕಿನ ಎಲ್ಲ ಘಟಕದಲ್ಲಿ ಸಸಿ ನೆಟ್ಟ ಮೇಲೆ ಅವರಿಗೆ ಸೆಲ್ಫಿ ವಿದ್ ಸ್ಯಾಪ್ಲಿಂಗ್ ಸ್ಪರ್ಧೆ ಏರ್ಪಡಿಸಲಾಗಿದ್ದು ಮೊದಲ ಮೂರು ಸ್ಥಾನ ಪಡೆದವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಕಳ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ ತಿಳಿಸಿದರು.
ಅತ್ತೂರು ಬಲಿಪ ಗುತ್ತುವಿನ ವಿಟ್ಠಲ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕೀಲ ಎಂ.ಕೆ. ವಿಜಯ ಕುಮಾರ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಹಿಂದು ಧಾರ್ಮಿಕ ಸಂಘಟಕ ಮಹೇಶ್ ಶೆಟ್ಟಿ ಕುಡ್ಪುಲಾಜೆ ತೆಳ್ಳಾರು, ಉದ್ಯಮಿ ಬೋಳ ಪ್ರಶಾಂತ್ ಕಾಮತ್, ಕಾಳಿಕಾಂಬ ದೇವಸ್ಥಾನ ಕಾರ್ಕಳದ ಆಡಳಿತ ಮೊಕ್ತೇಸರ ರಾಮಚಂದ್ರ ಆಚಾರ್ಯ, ಜಿಪಂ ಮಾಜಿ ಸದಸ್ಯ ಇರ್ವತ್ತೂರಿನ ಉದಯ್ ಕೋಟ್ಯಾನ್, ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಸಂಸ್ಕಾರ ಭಾರತಿಯ ಗುಣವಂತೇಶ್ವರ ಭಟ್, ಉದ್ಯಮಿ ಅರುಣ್ ನಿಟ್ಟೆ, ಕಾರ್ಕಳ ಎಪಿಎಂಸಿ ಅಧ್ಯಕ್ಷ ರತ್ನಾಕರ ಅಮೀನ್, ಶ್ರೀ ಅತ್ತೂರು ಪರ್ಪಲೆಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ಕೃಷ್ಣಗಿರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.