ಗಣೇಶ್ ಮಾವಂಜಿ ಸುಳ್ಯ
ಸುಳ್ಯ: ಸುಳ್ಯ ಹಾಗೂ ಪುತ್ತೂರು ತಾಲೂಕುಗಳನ್ನು ಬೆಸೆಯುವ ಪರ್ಲಿಕಜೆ-ಮಾವಿನಕಟ್ಟೆ ರಸ್ತೆ ಅಭಿವೃದ್ಧಿ ಬೇಡಿಕೆಗೆ ಎರಡು ದಶಕಗಳಿಗಿಂತಲೂ ಹಳೆಯ ಇತಿಹಾಸ ಇದೆ. ಹಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರಸ್ತೆ ಅಭಿವೃದ್ಧಿ ಕಂಡಿಲ್ಲ.
ಸುಳ್ಯ ತಾಲೂಕಿನ ಪರ್ಲಿಕಜೆ, ಜಬಳೆ, ನಿಡುಬೆ, ಕೊಚ್ಚಿ ಮುಖಾಂತರ ಪುತ್ತೂರು ತಾಲೂಕಿನ ದುಗ್ಗಲ, ಮಾವಿನಕಟ್ಟೆ, ಕಲ್ಲರ್ಪೆ ಭಾಗಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಸುಳ್ಯ ತಾಲೂಕು ವ್ಯಾಪ್ತಿಗೆ ಸೇರುವ ರಸ್ತೆ ಐವರ್ನಾಡು ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟರೆ ಪುತ್ತೂರು ಭಾಗದ ರಸ್ತೆ ಕೊಳ್ತಿಗೆ ಗ್ರಾ.ಪಂ ಅಧೀನಕ್ಕೆ ಬರುತ್ತದೆ. ಎರಡೂ ಪಂಚಾಯಿತಿ ವ್ಯಾಪ್ತಿಗೆ ಸೇರುವ ಸುಮಾರು ಐದು ಕಿ.ಮೀ ರಸ್ತೆ ಕಚ್ಚಾ ರಸ್ತೆಯಾಗಿದ್ದು ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.
ಕಳೆದೆರಡು ದಶಕಗಳಿಂದ ಎರಡು ತಾಲೂಕುಗಳನ್ನು ಬೆಸೆಯುವ ಈ ರಸ್ತೆಯ ಅಭಿವೃದ್ಧಿಯಾಗಬೇಕೆಂದು ಗೋಗರೆದರೂ ಅಭಿವೃದ್ಧಿಯಾಗದೆ ನನೆಗುದಿಗೆ ಬಿದ್ದಿದ್ದು ಇಲ್ಲಿನ ಜನರು ಈಗಲೂ ಮನವಿ ಪತ್ರ ಹಿಡಿದುಕೊಂಡು ಅಧಿಕಾರಿಗಳ, ಜನಪ್ರತಿನಿಧಿಗಳ ಮನೆಗೆ ಎಡತಾಕುತ್ತಿದ್ದಾರೆ. ಹಾಗಿದ್ದರೂ ಫಲಿತಾಂಶ ಮಾತ್ರ ಶೂನ್ಯ ಎಂಬುದು ಅವರ ಅಳಲು.
ಕೆಲ ವರ್ಷಗಳ ಹಿಂದೆ ಇದೇ ರಸ್ತೆಯ ಅಭಿವೃದ್ಧಿಗಾಗಿ ಇಲ್ಲಿನ ನಾಗರಿಕರೊಬ್ಬರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಆದರೆ, ಈ ರಸ್ತೆಯ ಮಧ್ಯಭಾಗದಲ್ಲಿರುವ ಮಣ್ಣಿನ ರಸ್ತೆ ಡಾಂಬರ್ ಅಥವಾ ಕಾಂಕ್ರೀಟ್ ಆಗಿ ಇನ್ನೂ ಮುಂಬಡ್ತಿ ಹೊಂದಿಲ್ಲ. ಈ ಭಾಗದಲ್ಲಿ ಸಿ.ಆರ್.ಸಿ. ಕಾಲನಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸುಮಾರು ಇನ್ನೂರಕ್ಕಿಂತ ಹೆಚ್ಚು ಮನೆಗಳಿದ್ದು, ಸಾವಿರಕ್ಕೂ ಅಧಿಕ ನಿವಾಸಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ರಸ್ತೆಯ ಈ ದುಸ್ಥಿತಿಯಿಂದಾಗಿ ಬಾಡಿಗೆ ವಾಹನಗಳು ಬರಲು ನಿರಾಕರಿಸುವ ಕಾರಣ ಇಲ್ಲಿನ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಈ ರಸ್ತೆ ಅಭಿವೃದ್ಧಿ ಹೊಂದಿದರೆ ಎರಡು ತಾಲೂಕಿನ ಭಾಗದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗುತ್ತದೆ. ಸುಮಾರು 24 ವರ್ಷಗಳ ಹಿಂದೆ ಗ್ರಾಮ ಸಡಕ್ ಯೋಜನೆಯಲ್ಲಿ ಈ ರಸ್ತೆಯ ಸ್ವಲ್ಪ ಭಾಗ ಡಾಂಬರೀಕರಣಗೊಂಡಿತ್ತು. ಆದರೀಗ ಹಾಕಿದ ಡಾಂಬರು ಎದ್ದು ಹೋಗಿ ಸಂಚರಿಸಲು ಸಾಧ್ಯವಾಗದಷ್ಟು ಕೆಟ್ಟು ಹೋಗಿದೆ.
ಪರ್ಲಿಕಜೆ-ನಿಡುಬೆ-ಕೊಚ್ಚಿಯವರೆಗಿನ ರಸ್ತೆ ತೀರಾ ಕೆಟ್ಟುಹೋಗಿದ್ದು ಮಳೆಗಾಲದಲ್ಲಂತೂ ಸಂಚಾರಕ್ಕೆ ಕೇವಲ ಜೀಪನ್ನು ಮಾತ್ರ ಆಶ್ರಯಿಸಬೇಕಾಗಿದೆ. ಈ ಭಾಗದ ಜನರು ಉದ್ಯೋಗ, ವಿದ್ಯಾಭ್ಯಾಸ ಹಾಗೂ ವ್ಯಾವಹಾರಿಕವಾಗಿ ಪುತ್ತೂರು ಹಾಗೂ ಸುಳ್ಯ ತಾಲೂಕುಗಳೆರೆಡರನ್ನೂ ಆಶ್ರಯಿಸಿದ್ದು ಈ ರಸ್ತೆಯ ಅಭಿವೃದ್ಧಿ ಅತ್ಯಗತ್ಯ. - ಮುರಳೀಧರ ಕೊಚ್ಚಿ, ನಾಗರಿಕ ಈ ರಸ್ತೆ ಕೊಳ್ತಿಗೆ ಹಾಗೂ ಐವರ್ನಾಡು ಗ್ರಾಪಂಗಳಿಗೆ ಸೇರಿರುವ ಕಾರಣ ಎರಡೂ ಪಂಚಾಯಿತಿಗಳು ಅಭಿವೃದ್ಧಿಗೊಳಿಸಬೇಕು. ಕೊಳ್ತಿಗೆ ಗ್ರಾ.ಪಂ ವತಿಯಿಂದ ಪ್ರತಿವರ್ಷ ಈ ರಸ್ತೆಯ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗುತ್ತಿದ್ದು, ಈ ವರ್ಷವೂ ಕಿಂಚಿತ್ ಅನುದಾನ ಇರಿಸಲಾಗಿದೆ. ಆದರೆ ಐವರ್ನಾಡು ಗ್ರಾ.ಪಂ ಈ ರಸ್ತೆಯ ಅಭಿವೃದ್ಧಿಗೆ ನಿರೀಕ್ಷಿತ ಸಹಕಾರ ಕೊಟ್ಟಿಲ್ಲ. ಗ್ರಾಪಂನಿಂದ ದೊರಕುವ ಅನುದಾನ ಅತ್ಯಲ್ಪವಾದರೂ ಪ್ರತಿ ವರ್ಷ ರಸ್ತೆ ಅಗಲೀಕರಣದ ಜತೆಗೆ ಇತರ ಅಭಿವೃದ್ಧಿಗೆ ಹಿನ್ನಡೆಯಾಗುವ ತಾಂತ್ರಿಕ ಸಮಸ್ಯೆ ಪರಿಹರಿಸಬೇಕಾಗಿದೆ. - ಯತೀಂದ್ರ ಕೊಚ್ಚಿ, ಕೊಳ್ತಿಗೆ ಪಂಚಾಯಿತಿ ಸದಸ್ಯ ಈ ರಸ್ತೆಯ ಮಧ್ಯಭಾಗ ಕಚ್ಚಾ ರಸ್ತೆಯಾಗಿದ್ದು ಡಾಂಬರೀಕರಣ ಆಗಿಲ್ಲ. ಗ್ರಾಪಂ ಅನುದಾನ ಅತ್ಯಲ್ಪವಾಗಿರುವ ಕಾರಣ ಜಿಪಂ ಅನುದಾನ ಅವಶ್ಯಕತೆ ಇದೆ. ಈ ಬಗ್ಗೆ ಸ್ಥಳೀಯರ ಬೇಡಿಕೆಯಂತೆ ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಂಡು ರಸ್ತೆ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುವುದು. - ಶ್ಯಾಮ್ ಪ್ರಸಾದ್, ಪಿಡಿಒ,ಐವರ್ನಾಡು